ಬೈಂದೂರು: ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಹೆಗ್ಡೆಯವರ ಮನೆಯ ಕಂಬಳ ಗದ್ದೆಯಲ್ಲಿ ಸಾಂಪ್ರದಾಯಿಕ ಕಂಬಳ ಮಹೋತ್ಸವ ಡಿ.10 ರಂದು ನಡೆಯಲಿದೆ ಎಂದು ಕಂಬಳ ಮನೆಯ ಟಿ.ನಾರಾಯಣ ಹೆಗ್ಡೆ ಕಂಠದಮನೆ ತಗ್ಗರ್ಸೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ತಗ್ಗರ್ಸೆ ಕಂಬಳದ ಐತಿಹಾಸಿಕ ಹಿನ್ನೆಲೆ: ತಗ್ಗರ್ಸೆ ಕಂಠದಮನೆ ಟಿ.ನಾರಾಯಣ ಹೆಗ್ಡೆ ಯವರ ಮನೆಯ ಕಂಬಳ ನೂರಾರು ವರ್ಷದ ಐತಿಹಾಸಿಕ ಹಿನ್ನೆಲೆ ಹೊಂದಿದೆ.ಅತ್ಯಂತ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯುವ ಈ ಕಂಬಳೋತ್ಸವ ಹಲವು ಕಟ್ಟುಪಾಡುಗಳನ್ನು ಹೊಂದಿದೆ.ಅತ್ಯಂತ ವಿಶಾಲವಾದ ಈ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕು.ಈ ಗದ್ದೆ ಮೊದಲ ನಾಟಿಯಿಂದ ಸೇರಿ ಪ್ರತಿ ಹಂತದಲ್ಲಿ ಕೊರಗ ಸಮುದಾಯದವರಿಗೆ ವಿಶೇಷ ಪ್ರಾದಾನ್ಯವಿದೆ.ಕಂಬಳದ ದಿನ ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಗದ್ದೆಯ ಸುತ್ತ ಇರುವ ಪರಿವಾರ ದೇವರಿಗೆ ಪೂಜೆ ನೀಡಲಾಗುತ್ತದೆ.ಕಂಬಳಗದ್ದೆ ತೋರಣ ಸಿದ್ದಪಡಿಸಿದ ಬಳಿಕ ನಿಗಧಿಯಾದ ಮೂಹೂರ್ತದಲ್ಲಿ ಧ್ವಜ ನೆಡಲಾಗುತ್ತದೆ. ಬೈಂದೂರು ಭಾಗದ ಅತ್ಯಂತ ಪ್ರಸಿದ್ದ ಮನೆತನಗಳಾದ ಯಡ್ತರೆ ಮನೆ,ಕಳವಾಡಿಮನೆ,ಮದ್ದೋಡಿ ಮನೆ ಮನೆತನದವರಿಗೆ ಮೊದಲ ಪ್ರಾಸಸ್ಯ ನೀಡಲಾಗುತ್ತದೆ.ತಗ್ಗರ್ಸೆ ಕಂಬಳೋತ್ಸವದಲ್ಲಿ  60ಕ್ಕೂ ಅಧಿಕ  ಜೋಡಿ ಕೋಣಗಳು ಭಾಗವಹಿಸುತ್ತದೆ.ಮಾತ್ರವಲ್ಲದೆ ಅನೇಕ ಕೃಷಿಕರು ತಮ್ಮ ಸಾಕು ಕೋಣಗಳನ್ನು ಕಂಬಳಗದ್ದೆಗೆ ಇಳಿಸುವ ಸಂಪ್ರದಾಯ ಕೂಡ ಇದೆ.ಈಗಿನ ಮನೆಯವರು ಸುಮಾರು 65 ವರ್ಷಗಳಿಂದ  ಕಂಬಳವನ್ನು ಮುಂದುವರಿಸಿಕೊಂಡು ಬಂದಿದ್ದು ಪ್ರತಿವರ್ಷ ಸಾಂಪ್ರದಾಯಿಕವಾಗಿ ಮುನ್ನೆಡೆಸಿಕೊಂಡು ಬರುತ್ತಿರುವುದು ಟಿ.ನಾರಾಯಣ ಹೆಗ್ಡೆ ಮನೆಯವರ ಹೆಗ್ಗಳಿಕೆಯಾಗಿದೆ. ತಗ್ಗರ್ಸೆ ಕಂಬಳೋತ್ಸವ ಬೈಂದೂರಿನ ಗ್ರಾಮೀಣ ಭಾಗದ ಸಂಭ್ರಮವಾಗಿದೆ.ಎಷ್ಟೆ ಕೆಲಸದ ಒತ್ತಡ ಇದ್ದರು ಕೂಡ ಹಳ್ಳಿ ಭಾಗದ ಜನರು ತಗ್ಗರ್ಸೆ ಕಂಬಳೋತ್ಸವ ನೋಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ.ಭಕ್ತಿಯ ಜೊತೆಗೆ ವಿಶಿಷ್ಟತೆ ಹೊಂದಿದ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರು ಪ್ರತಿ ವರ್ಷ ಅಚ್ಚುಕಟ್ಟಾಗಿ ಕಂಬಳೋತ್ಸವವನ್ನು ಆಯೋಜಿಸುತ್ತಾರೆ.

 

 

Leave a Reply

Your email address will not be published. Required fields are marked *

12 − ten =