ಬೈಂದೂರು; ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಿರುವ ಸೇವೆಯನ್ನು ಸ್ಥಗಿತಗೊಳಿಸಿ ಆಸ್ಪತ್ರೆ ಕೈತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಬಂದೂರಿನ ಸಾರ್ವಜನಿಕರು ಗುರುವಾರ ಬೈಂದೂರು ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ಹಠಾತ್ ಪ್ರತಿಭಟನೆಗೆ ಮುಂದಾದರು.ಗ್ರಾಮೀಣ ಭಾಗಗಳು ಹೆಚ್ಚಿರುವ ಬೈಂದೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕೈತಪ್ಪಿದರೆ ಅಹೋರಾತ್ರಿ ಪ್ರತಿಭಟನೆ ನಡೆಸುವ ಸಿದ್ದತೆ ನಡೆಸಿದರು.ಈ ಕುರಿತಂತೆ ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸಲು ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್ ಸಾರ್ವಜನಿಕರ ಬೇಡಿಕೆಯಂತೆ ಯಾವುದೇ ಕಾರಣಕ್ಕೂ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಸವಲತ್ತುಗಳನ್ನು ಕಡಿತಗೊಳಿಸುವುದಿಲ್ಲ ಮತ್ತು ಈಗಿರುವ ಸೇವೆಯನ್ನು ಮುಂದುವರಿಸುವುದಾಗಿ ತಿಳಿಸಿದರು ಮತ್ತು ಶೀಘ್ರದಲ್ಲಿ ತಾಲೂಕು ಆಸ್ಪತ್ರೆ ಆಗುವ ಕುರಿತು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ಸರಕಾರದ ಹೊಸ ನಿಯಮಗಳ ಪ್ರಕಾರ ಸಮುದಾಯ ಆರೋಗ್ಯ ಕೇಂದ್ರ ಸ್ಥಗಿತಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿತ್ತು.ಈ ಕುರಿತು ವಿವಿಧ ಪತ್ರಿಕೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆ ಆಗಿತ್ತು ಮತ್ತು ಇಲಾಖೆಯ ಕ್ರಮ್ಕಕೆ ಸಾರ್ವಜನಿಕರ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಬೈಂದೂರು ತಾಲೂಕು ಘೋಷಣೆಯಾದ ಬಳಿಕ ಆಸ್ಪತ್ರೆ ಮೇಲ್ದರ್ಜೆಗೇರಬೇಕೆನ್ನುವ ಆಗ್ರಹ ಇದ್ದರು ಸಹ ಇದುವರೆಗೆ ತಾಲೂಕು ಆಸ್ಪತ್ರೆಯಾಗಿ ಘೋಷಣೆಯಾಗಿಲ್ಲ.ಸುಮಾರು 35 ರಿಂದ 40 ಕಿ.ಮೀ ವ್ಯಾಪ್ತಿಯ ಗ್ರಾಮೀಣ ಭಾಗಗಳಿಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವೆ ಅವಲಂಬನೆಯಾಗಿದೆ.ಆದರೆ ಕಳೆದ ವಾರ ಸರಕಾರದ ಹೊಸ ಮಾನದಂಡದ ಪ್ರಕಾರ ಆಸ್ಪತ್ರೆ ಪ್ರಗತಿ ಕುಂಠಿತವಾದ ಹಿನ್ನೆಲೆಯಲ್ಲಿ ಇಲ್ಲಿರುವ ತಜ್ಞ ವೈದ್ಯರನ್ನು ವರ್ಗಾಯಿಸಿ ಸಮುದಾಯ ಆರೋಗ್ಯ ಕೇಂದ್ರದ ಸವಲತ್ತನ್ನು ಕಡಿತಗೊಳಿಸುವ ಸಿದ್ದತೆ ನಡೆಸಲಾಗಿತ್ತು.ಈ ಕುರಿತು ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆ ಹುಟ್ಟುಹಾಕಿತ್ತು.
ಗುರುವಾರ ಬೆಳಿಗ್ಗೆ ಯಾವುದೇ ಕಾರಣಕ್ಕೂ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಬೈಂದೂರಿನಿಂದ ಕೈ ತಪ್ಪಬಾರದೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳು ಸಾರ್ವಜನಿಕರು ಆಸ್ಪತ್ರೆಗೆ ಜಮಾಯಿಸಿ ಪ್ರತಿಭಟನೆಗೆ ಮುಂದಾದರು.ಈ ವಿದ್ಯಮಾನದ ಬಳಿಕ ಸ್ಥಳಕ್ಕಾಗಮಿಸಿ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್ ಸಾರ್ವಜನಿಕರನ್ನು ಸಮಾಧಾನ ಪಡಿಸಿದರು. ಸರಕಾರದ ಮಾನದಂಡ ಸಹಜ.ಆದರೆ ಯಾವುದೇ ಕಾರಣ್ಕಕೂ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದ ಹುದ್ದೆಗಳನ್ನು ಹಿಂಪಡೆಯುವುದಿಲ್ಲ .ಹೆರಿಗೆ ಸೇರಿದಂತೆ ತಜ್ಞ ವೈದ್ಯರನ್ನು ನೇಮಿಸಲಾಗುತ್ತದೆ.ಶೀಘ್ರದಲ್ಲಿ ತಾಲೂಕು ಆಸ್ಪತ್ರೆ ಆಗುವ ಸಿದ್ದತೆ ನಡೆಸಲಾಗುವುದು. ಗ್ರಾಮೀಣ ಭಾಗಗಳು ಹೆಚ್ಚಿರುವ ಬೈಂದೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಪೂರ್ಣ ಸೇವೆ ನೀಡುತ್ತದೆ ಮತ್ತು ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಆಧರಿಸಿ ವ್ಯವಸ್ಥೆ ಸುಧಾರಿಸಲಾಗುವುದು ಎಂದರು.
ಪ್ರತಿಭಟನೆ ನೇತ್ರತ್ವ ವಹಿಸಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಬೈಂದೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಬಡ ಜನರಿಗೆ ಸಮರ್ಪಕ ಸೇವೆ ದೊರೆಯುತ್ತಿಲ್ಲ.ಸಣ್ಣಪುಟ್ಟ ಕಾಯಿಲೆ, ಹೆರಿಗೆ ವಿಷಯದಲ್ಲಿ ಖಾಸಗಿ ಆಸ್ಪತ್ರೆಗೆ ಹೋಗಲು ಸೂಚಿಸುತ್ತಾರೆ.ಇದರ ನಡುವೆ ಇಲಾಖೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಹಿಂಪಡೆದು ತಜ್ಞ ವೈದ್ಯರನ್ನು ವರ್ಗಾಯಿಸುವ ಸಿದ್ದತೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.ಬೈಂದೂರು ಬಹುತೇಕ ಗ್ರಾಮೀಣ ಭಾಗಗಳನ್ನು ಒಳಗೊಂಡಿದೆ.ರೈತರು, ಮೀನುಗಾರರು, ಹೆದ್ದಾರಿ, ರೈಲ್ವೆ ಮುಂತಾದ ಹತ್ತು ಹಲವು ವ್ಯವಸ್ಥೆಯಲ್ಲಿ ತುರ್ತು ಆರೋಗ್ಯ ಸಮಸ್ಯೆ ಬಂದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜನ ಬರುತ್ತಾರೆ.ಆದರೆ ಆಸ್ಪತ್ರೆಯಲ್ಲಿ ಸೇವೆ ಸಿಗದಿದ್ದರೆ ಬಡ ಜನರು, ರೈತರು 40 ಕಿ.ಮೀ ದೂರವಿರುವ ಕುಂದಾಪುರಕ್ಕೆ ತೆರಳಬೇಕು ಹೀಗಾಗಿ ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹರಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಸಾರ್ವಜನಿಕ ಬೇಡಿಕೆ ಮತ್ತು ಬೈಂದೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಗತ್ಯತೆ ವಿಷಯ ಸರಕಾರದ ಗಮನದಲ್ಲಿದೆ.ಯಾವುದೇ ಕಾರಣಕ್ಕೂ ಬೈಂದೂರು ಜನರಿಗೆ ಆರೋಗ್ಯ ಸೇವೆಯ ವೃತ್ಯಯವಾಗದು.ವ್ಯವಸ್ಥೆ ಸುಧಾರಣೆ ಮಾಡುವ ಭರವಸೆ ನೀಡಿದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ,ಮ್ಯಾಥ್ಯೂ ತೂದಳ್ಳಿ,ಸನ್ನಿ ಫಾದರ್,ಪದ್ಮಾಕ್ಷ ಗೋಳಿಬೇರು,ಸುಧಾಕರ ಶೆಟ್ಟಿ ನೆಲ್ಯಾಡಿ ಹಾಗೂ ರೈತ ಸಂಘದ ಪದಾಽಕಾರಿಗಳು ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು