ಉಪ್ಪುಂದ.ಸೆ.13; ಸಂಘವು ಸಾಧನೆಯ 49ವರ್ಷಗಳನ್ನು ಪೂರೈಸಿ, ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ವರದಿ ವರ್ಷದಲ್ಲಿ ಸಂಘವು ಸಾಧಿಸಿದ ಯಶಸ್ಸು ಅಭೂತಪೂರ್ವವಾದದ್ದು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ಸುದೀರ್ಘಕಾಲ ಗುರುತಿಸಿಕೊಂಡಿರುವ ತಮ್ಮ ಸಂಘವು ವರದಿ ವರ್ಷದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ಸಂಘವು ರೂ. 7.8 ಕೋಟಿ ಲಾಭ ಗಳಿಸಿದ್ದು ಶೇ.15 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಸೆ.13ರಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೂ. 1,335.87 ಕೋಟಿ ವ್ಯವಹಾರ; ವರದಿ ವರ್ಷದಲ್ಲಿರೂ. 1,335.87 ಕೋಟಿಗೂ ಮಿಕ್ಕಿ ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ಒಟ್ಟು 282 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಸಂಘವು ರೂ. 258.30ಕೋಟಿ ಸಾಲ ನೀಡಿದೆ. ರೂ. 77.16ಕೋಟಿ ಹೂಡಿಕೆ ಮತ್ತು ರೂ. 45.35ಕೋಟಿ ನಿಧಿಗಳನ್ನು ಹೊಂದಿ ಸದೃಢವಾಗಿದೆ. 9200 ಸದಸ್ಯರನ್ನೊಳಗೊಂಡ 974 ರೈತಸಿರಿ ಸ್ವಸಹಾಯ ಗುಂಪುಗಳನ್ನು ಸಂಯೋಜಿಸಿ ಗುಂಪುಗಳಿಗೆ ಸಾಲವನ್ನು ನೀಡಲಾಗಿದೆ ಎಂದರು. 820 ಸದಸ್ಯರ 96 ರೈತ ಕೂಟಗಳಿದ್ದು. ರೈತ ಕೂಟದ ಸದಸ್ಯರಿಗೆ ಪ್ರತಿ ತಿಂಗಳೊಂದರಂತೆ ಕೊನೆಯ ಶನಿವಾರ ಮಾಸಿಕ ಸಭೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುತ್ತಿದ್ದೇವೆ ಹಾಗೂ ರೈತರ ತಂಡದೊಂದಿಗೆ ರಾಜ್ಯ ಮಟ್ಟದಲ್ಲಿ ಜರಗುವ ಕೃಷಿ ಮೇಳಕ್ಕೆ ಭಾಗವಹಿಸಿ ಅಧ್ಯಯನ ಪ್ರವಾಸ ಕೈಗೊಂಡಿರುತ್ತೇವೆ ಎಂದರು.
ಉತ್ತಮ ಸೇವೆಗೆ ವಿವಿಧ ಪ್ರಶಸ್ತಿ; ಸಂಘವು ಕಳೆದ 24 ವರ್ಷಗಳಿಂದ ಸತತವಾಗಿ ‘ಎ’ ವರ್ಗದ ಆಡಿಟ್ ವರ್ಗೀಕರಣ ಹೊಂದಿದ್ದು, ಸಂಘದ ಸರ್ವಾಂಗೀಣ ನಿರ್ವಹಣೆಗೆ ವರದಿ ವರ್ಷದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಕೊಡಮಾಡಿದ “ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ’ಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸ್ವೀಕರಿಸಲಾಗಿದೆ. ಸಂಘವು ಪ್ರಾಯೋಜಿಸಿರುವ ರೈತಸಿರಿ ರೈತ ಸೇವಾ ಒಕ್ಕೂಟಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ ಸಂದಿದೆ.
ಹೊಸತ ಸೇವೆಗೆ ರೈತಸಿರಿ ಅಗ್ರಿ ಮೊಲ್; ರಾಜ್ಯದ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿಯೇ ಪ್ರಪ್ರಥಮವಾಗಿ ಸಂಘದ ಮಾಲಕತ್ವದಲ್ಲಿ ಖರೀದಿಸಿದ ನಿವೇಶನದಲ್ಲಿ ವಿಶಿಷ್ಟ ವಿನ್ಯಾಸದ “ರೈತಸಿರಿ” ಅಗ್ರಿ ಮೊಲ್ ಸರ್ವ ಸರಕಿನ ಮಳಿಗೆ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಸೀಮಿತ ಅವಧಿಯೊಳಗೆ ಕಟ್ಟಡ ನಿರ್ಮಿಸಿ. ಸದಸ್ಯರಿಗೆ. ಗ್ರಾಹಕರಿಗೆ ಹೊಸತನದ ಸೇವೆ ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಸಾಯನಿಕ ಗೊಬ್ಬರ, ಕೃಷಿ ಉಪಕರಣಗಳ ಮಾರಾಟ ಮತ್ತು ಬಾಡಿಗೆ, ಪಡಿತರ ಸಾಮಾಗ್ರಿ ವಿತರಣೆ, ಮೀನುಗಾರಿಕಾ ಸೀಮೆಎಣ್ಣೆ ವಿತರಣೆ. ಡಿಜಿಟಲ್ ಸೇವಾ ಸಿಂಧೂ (ಸಿ.ಎಸ್.ಸಿ) ಹಾಗೂ ಇನ್ನಿತರ ಸೇವಾ ಸೌಲಭ್ಯಗಳು ಸದಸ್ಯರಿಗೆ, ಗ್ರಾಹಕರಿಗೆ ನೀಡಲಾಗುತ್ತಿದೆ. ಸಂಘದ ಶ್ರೇಯೋಭಿವೃದ್ಧಿಗೆ ಅಡಿಪಾಯ ಹಾಕಿದ ಹಿರಿಯ ಸದಸ್ಯರನ್ನು ಮಹಾಸಭೆಯಲ್ಲಿ ರೈತಸಿರಿ ಗೌರವಾರ್ಪಣೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಂಜು ದೇವಾಡಿಗ, ಸಂಘದ ನಿರ್ದೇಶಕರಾದ ಈಶ್ವರ ಹಕ್ಲತೋಡ್, ಮೋಹನ ಪೂಜಾರಿ, ಬಿ.ಎಸ್. ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್, ಭರತ್ ದೇವಾಡಿಗ, ಹೂವ ನಾಯ್ಕ, ಪ್ರಕಾಶ ಎನ್. ಪೂಜಾರಿ, ರಾಜೇಶ ದೇವಾಡಿಗ, ಉದಯಕುಮಾರ್ ಶೆಟ್ಟಿ, ದಿನೀತಾ ಶೆಟ್ಟಿ, ಲೀಲಾ ಪೂಜಾರಿ, ಪದನಿಮಿತ್ತ ನಿರ್ದೇಶಕ ರಂಜಿತ್ ಕುಮಾರ್ ಶೆಟ್ಟಿ, ಜಿಲ್ಲಾ ಬ್ಯಾಂಕ್ ನಿರ್ದೇಶಕ ಎಂ. ಮಹೇಶ ಹೆಗ್ಡೆ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸ್ವಾಗತಿಸಿ ನಿರೂಪಿಸಿದರು. ಹಿರಿಯ ವ್ಯವಸ್ಥಾಪಕ ಚಂದ್ರಯ್ಯ ಶೆಟ್ಟಿ ವಂದಿಸಿದರು.