ಬೈಂದೂರು: ಬೈಂದೂರು ತಾಲೂಕಿನಾದ್ಯಂತ ಮಳೆಯ ಅಬ್ಬರ ಅಧಿಕಗೊಂಡಿದ್ದು ಬಹುತೇಕ ಭಾಗ ಜಲಾವೃತಗೊಳ್ಳುವ ಜೊತೆಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.ಬೈಂದೂರು,ಕೊಲ್ಲೂರು,ತಗ್ಗರ್ಸೆ ರಸ್ತೆ ನೀರು ತುಂಬಿದ್ದು ಕೋರ್ಟ್ ಆವರಣ ಜಲಾವೃತಗೊಂಡಿದೆ.ನ್ಯಾಯಾಲಯ ಸಂಕೀರ್ಣಕ್ಕಾಗಿ ಬೈಂದೂರಿನಲ್ಲಿ 2 ಎಕರೆ ಜಾಗ ಮೀಸಲಿರಿಸಿದ್ದು ಈ ಜಾಗದಲ್ಲಿ ಶೀಘ್ರ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಬೇಕಿದೆ.
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಭಾಗ ಸೇರಿದಂತೆ ಬಹುತೇಕ ಕಡೆ ಹೊಲ,ಗದ್ದೆ ಸೇರಿದಂತೆ ಕೃಷಿ ಭೂಮಿ ಜಲಾವೃತಗೊಂಡಿದೆ.ಯಳಜಿತ ಗ್ರಾಮದ ಸಾತೇರಿ ಸೇತುವೆ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.ಕಳವಾಡಿ,ತಗ್ಗರ್ಸೆ,ಮಯ್ಯಾಡಿ ಮುಂತಾದ ಕಡೆಗಳಲ್ಲಿ ರಸ್ತೆ ಮೇಲೆ ನೀರು ನಿಂತಿದ್ದು ವಾಹನ ಸವಾರರು ಪರದಾಡುವಂತಾಗಿದೆ.ಉಪ್ಪುಂದ ಹೊಳೆಬಾಗಿಲು ಬೈಲ್‌ಮನೆ ಮಾಚಿ ನಾಗ ದೇವಾಡಿಗ ಇವರ ಕೊಟ್ಟಿಗೆಯ ಮೇಚ್ಚಾವಣೆ ಗಾಳಿ ಮಳೆಗೆ ಹಾರಿಹೋಗಿದೆ.ಶಿರೂರು ಗ್ರಾಮದ ಪೇಟೆತೊಪ್ಪಲು ರಾಯರಹಿತ್ಲು ನಾಗಪ್ಪ ಮೊಗೇರ್ ಇವರ ಮನೆ ಮೇಲೆ ಮರ ಬಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.ಬೈಂದೂರು ಪಟ್ಟಣ ಪಂಚಾಯತ್ ವತಿಯಿಂದ ಯಡ್ತರೆ ಬಂಟರ ಭವನದಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ಆರಂಭಗೊಂಡಿದೆ.ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ಸಾರ್ವಜನಿಕರು ಸೂಕ್ತ ಮುಂಜಾಗೃತೆ ವಹಿಸುವಂತೆ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ವರದಿ/ಗಿರಿ ಶಿರೂರು