ಬೈಂದುರು: ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಆರಕ್ಷಕ ಠಾಣೆ ಬೈಂದೂರು ಇದರ ವತಿಯಿಂದ ಪೊಲೀಸ್ ಇಲಾಖೆಯ ಮಹತ್ವಕಾಂಕ್ಷೆಯ ದೃಷ್ಟಿ ಯೋಜನೆ ಉದ್ಘಾಟನೆ ಬೈಂದೂರು ರೋಟರಿ ಭವನದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯ ಗ್ರಹ ಇಲಾಖೆಯ ನಿರ್ದೇಶನದಂತೆ ಪ್ರತಿ ಮನೆ ಮನೆಗಳಿಗೂ ಪೊಲೀಸ್ ಸುರಕ್ಷತೆ ತಲುಪುವ ರೀತಿಯಲ್ಲಿ ಹಲವು ಯೋಜನೆಗಳನ್ನು ಜಿಲ್ಲೆಯಲ್ಲಿ ಅಳವಡಿಸಲಾಗಿದೆ.ದೃಷ್ಟಿ ಯೋಜನೆ ಮೂಲಕ ನೇಮಿಸಲಾದ ಒಬ್ಬ ಗಾರ್ಡ್‌ಗೆ 50 ರಿಂದ 150 ಮನೆಗಳ ಮೇಲ್ವಿಚಾರಣೆ ಜವಬ್ದಾರಿ ನೀಡಲಾಗುತ್ತದೆ.ಪೊಲೀಸ್ ತಂಡ ಇವರಿಂದ ಮಾಹಿತಿ ಪಡೆಯುತ್ತದೆ.ನುರಿತ ತರಬೇತಿ ಪಡೆದ ಸಿಬ್ಬಂದಿಗಳ ನೇಮಕ ಮಾಡಲಾಗುತ್ತದೆ.ಇದರಿಂದ ವಿವಿಧ ರೀತಿಯ ಅಪರಾಧ ಚಟುವಟಿಕೆ ಕಡಿಮೆಯಾಗುತ್ತದೆ.ಮಾತ್ರವಲ್ಲದೆ ಗರುಡ ಯೋಜನೆ ಮೂಲಕ 110 ಸ್ಥಳಗಳಲ್ಲಿ 600 ಸಿ.ಸಿ ಕ್ಯಾಮರಾ ಅಳವಡಿಸಿ ಪ್ರಾಯೋಗಿಕವಾಗಿ 20 ಕಡೆ ಅನುಷ್ಠಾನಗೊಳಿಸಲಾಗುತ್ತದೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಮಾತನಾಡಿ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಜನಸ್ನೇಹಿ ಯೋಜನೆಗಳು ಅಪರಾಧ ಸಂಖ್ಯೆ ಇಳಿಮುಖದ ಜೊತೆಗೆ ಕಳ್ಳತನ ಮುಂತಾದ ಪ್ರಕರಣ ತಡೆಗಟ್ಟಲು ಆನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು,ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ನಾಗರಾಜ ಗಾಣಿಗ,ನಾಗರಾಜ ಶೆಟ್ಟಿ,ಸದಾಶಿವ ಡಿ.ಪಡುವರಿ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ,ಜಂಬೋ ಸ್ಟಾರ್ ಸೆಕ್ಯೂರಿಟಿ ಮಾನವ ಸಂಪನ್ಮೂಲ ಅಧಿಕಾರಿ ಕಾವ್ಯ ಎಚ್.ಆರ್ ಉಪಸ್ಥಿತರಿದ್ದರು.
ಕುಂದಾಪುರ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ ಕುಲಕರ್ಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬೈಂದೂರು ಆರಕ್ಷಕ ಠಾಣೆಯ ಠಾಣಾಧಿಕಾರಿ ತಿಮ್ಮೇಶ ಬಿ.ಎನ್ ಸ್ವಾಗತಿಸಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಕ್ರೈಂ ಇನ್ಸ್‌ಪೆಕ್ಟರ್ ನವೀನ್ ಪಿ.ಬೋರ್ಕರ್ ವಂದಿಸಿದರು.
ವರದಿ/ಗಿರಿ ಶಿರೂರು