ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಕಳೆದ ಒಂದು ವರ್ಷದಿಂದ ಬೈಂದೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ನ್ಯಾಯ ದೊರಕದ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಸುಮಾರು ಐನೂರಕ್ಕೂ ಅಧಿಕ ರೈತರು ಬೈಂದೂರಿನಿಂದ ಬೆಂಗಳೂರಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಿರುತ್ತಾರೆ.ಮಾತ್ರವಲ್ಲದೆ ಬೆಂಗಳೂರಿನ  ವಿವಿಧ ಸಂಘಟನೆಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಭಾಗವಹಿಸಿದೆ.

ಪ್ರತಿಭಟನೆ ನೇತ್ರತ್ವ ವಹಿಸಿ ಮಾತನಾಡಿದ ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕಳೆದ ಒಂದು ವರ್ಷದಿಂದ ಬೈಂದೂರಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.ಜಿಲ್ಲಾಡಳಿತ ಪೂರಕ ವರದಿಯನ್ನು ಸರಕಾರಕ್ಕೆ ನೀಡಿದರು ಸಹ ಸರಕಾರದ ಮಟ್ಟದಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಅನಗತ್ಯ ವಿಳಂಬವಾಗುತ್ತಿದೆ.ಹೀಗಾಗಿ ಸರಕಾರದ ಗಮನಸೆಳೆಯಬೇಕೆಂದು ರೈತರು ಬೆಂಗಳೂರಿಗೆ ಬಂದಿದ್ದೇವೆ.ಸಂಬಂಧಪಟ್ಟ ಸಚಿವರಿಂದ ಸ್ಪಷ್ಟತೆ ದೊರೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಈಗಾಗಲೇ ಸರಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು  ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ವಿಳಂಬವಾಗುತ್ತಿದೆ.ಹೀಗಾಗಿ ರೈತರಿಗೆ ಶೀಘ್ರ ನ್ಯಾಯ ದೊರೆಯುತ್ತದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಸರಕಾರದ ಪರವಾಗಿ ಆಗಮಿಸಿದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅವರು ಬೈಂದೂರು ರೈತರ ಹೋರಾಟದ ವಿಷಯದ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಕೂಡ ಚರ್ಚೆಯಾಗಿದೆ.ಈ ಭಾಗದ ರೈತರ ಬೇಡಿಕೆ ನ್ಯಾಯಯುತವಾಗಿದೆ.ಮುಖ್ಯಮಂತ್ರಿಗಳ ಜೊತೆ ಹಾಗೂ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ರೈತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಸರಕಾರದ ವತಿಯಿಂದ ಮಾಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ,ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ,ಡಾ.ಸುಬ್ರಹ್ಮಣ್ಯ ಭಟ್ ಬೈಂದೂರು,ಬೆಂಗಳೂರಿನ ವಿವಿಧ ಸಂಘಟನೆಯ ಮುಖಂಡರು ಹಾಗೂ ನೂರಾರು ರೈತರು ಹಾಜರಿದ್ದರು.

ರೈತ ಮುಖಂಡ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವೀರಭದ್ರ ಗಾಣಿಗ ವಂದಿಸಿದರು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

5 + twenty =