ಬೈಂದೂರು: ಕಳೆದ 80 ದಿನಗಳಿಂದ ಹೋರಾಟ ನಡೆಸುತ್ತಿದ್ದರು ಸಹ ಅಧಿಕಾರಿಗಳ ನಿರ್ಲಕ್ಷಕ್ಕೆ ಬೈಂದೂರು ಭಾಗದ ಗ್ರಾಮೀಣ ರೈತರ ಆಕ್ರೋಶ ಹೆಚ್ಚಿಸಿದೆ.ಅಧಿಕಾರಿಗಳ ವಿಳಂಬದಿಂದ ರೈತರ ಬೇಡಿಕೆಗೆ ನ್ಯಾಯ ಪಡೆಯಲು ಹಿನ್ನೆಡೆಯಾಗುತ್ತಿದೆ.ಜಿಲ್ಲಾಡಳಿತ ಸೇರಿದಂತೆ ಯಾವುದೇ ಅಧಿಕಾರಿಗಳನ್ನು ರೈತರು ಬೇಟಿಯಾಗಿ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ರೈತರ ಆಕ್ರೋಶ ಹೆಚ್ಚಿದ್ದು ಶುಕ್ರವಾರ ಬೈಂದೂರಿನಲ್ಲಿ ಸಾವಿರಾರು ರೈತರು ಬ್ರಹತ್ ಅರೆಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದ್ದಾರೆ.ಅವರು ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ 80ನೇ ದಿನ ಅನಿರ್ದಿಷ್ಟಾವಧಿ ಧರಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾವಿರಾರು ರೈತರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.ನೂರು ದಿನದಿಂದ ಹೋರಾಟ ನಡೆಯುತ್ತಿದೆ.ಜಿಲ್ಲಾಧಿಕಾರಿಗಳು ರೈತರ ನೋವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಗರಾಭಿವೃದ್ದಿ ಪ್ರೊಜೆಕ್ಟ್ ಡೈರೆಕ್ಟರ್ ರೈತರ ಬೇಡಿಕೆ ಈಡೇರದಂತೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ.ಸರಕಾರದ ಸಚಿವೆರೇ ಸೂಚಿಸಿದರು ಕೂಡ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ರೈತರ ವಿಚಾರದಲ್ಲಿ ಸಲ್ಲದು. ರಾಜ್ಯಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಉತ್ತರ ನೀಡಬೇಕಾಗುತ್ತದೆ.ಈ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿ.ರೈತರು ತಾಳ್ಮೆ ಕಳೆದುಕೊಂಡರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತ ನೇರ ಕಾರಣವಾಗುತ್ತದೆ ಎಂದರು.
ಬೈಂದೂರು ತಹಶೀಲ್ದಾರರಿಗೆ ಮನವಿ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ.ಸರಕಾರದಿಂದ ಸ್ಪಷ್ಟ ನಿರ್ದೇಶನ ದೊರಕುವವರೆಗೆ ಪಟ್ಟಣ ಪಂಚಾಯತ್ ಸರಕಾರದ ಯಾವುದೇ ಅನುದಾನದ ಕಾಮಗಾರಿ ನಡೆಸಬಾರದು ಎಂದು ರೈತರು ತಹಶೀಲ್ದಾರರಿಗೆ ಮನವಿ ನೀಡಿದರು. ಶೇಡ್ಕುಳಿ ಭಾಗದ ರೈತರು ಹಾಗೂ ವಿವಿಧ ರೈತ ಮುಖಂಡರು ಹಾಜರಿದ್ದರು.
