ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ ಬೈಂದೂರು ಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಈ ಭಾರಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ “ಕೆಸರಲ್ಲೊಂದು ದಿನ -ಗಮ್ಮತ್ತ್” ಕಾರ್ಯಕ್ರಮ ಅಗಸ್ಟ್ 03ರ ಭಾನುವಾರ ಬೆಳಿಗ್ಗೆ 9 ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಅದರ ಪಕ್ಕದ ಜೆ.ಎನ್.ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು: ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ, ವಾಲಿಬಾಲ್ ಸ್ಪರ್ಧೆ, ಕೆಸರ್‌ಗದ್ದೆ ಓಟದ ಸ್ಪರ್ಧೆ, ಅಡಿಕೆ ಹಾಳಿಯಲ್ಲಿ ಎಳೆಯುವುದು ಸ್ಪರ್ಧೆಗಳು ಇರಲಿದ್ದು, ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಥ್ರೋ ಬಾಲ್ ಸ್ಪರ್ಧೆ, ಕೆಸರ್‌ಗದ್ದೆಓಟ, ಮಡ್ಲ್ ನೇಯುವ ಸ್ಪರ್ಧೆ, ಅಡಿಕೆ ಹಾಳಿಯಲ್ಲಿ ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಿಗೆ ಕೆಸರ್‌ಗದ್ದೆ ಓಟ ಸ್ಪರ್ಧೆ, ಬೆನ್‌ಚೆಂಡ್ ಆಟದ ಸ್ಪರ್ಧೆ, ಲಿಂಬೆ ಚಮಚ ಓಟ ಸ್ಪರ್ಧೆ, ಗೂಟಕ್ಕೆ ಸುತ್ತಿ ಓಡುವುದು ಸ್ಪರ್ಧೆ, ಕುಂದಾಪ್ರ ಕನ್ನಡ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದೆ.
ಹಲವು ಕಾರ್ಯಕ್ರಮಗಳು: ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ ಇರಲಿದ್ದು, ಇದಕ್ಕೂ ಮೊದಲು ಯಡ್ತರೆ ಬೈಪಾಸಿನಿಂದ ಮೆರವಣಿಗೆ, 5 ಜೊತೆ ಕಂಬಳ ಕೋಣಗಳ ಆಕರ್ಷಕ ಓಟ, ಸಾಂಕೇತಿಕ ಕಬ್ಬಡಿ ಆಟ, ನಟ ಪ್ರಮೋದ್ ಶೆಟ್ಟಿ ಸೇರಿದಂತೆ ಸಿನಿ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿ, ಮನು ಹಂದಾಡಿ, ಚೇತನ್ ನೈಲಾಡಿ ಅವರ ಹಾಸ್ಯ,ಕುಂದಾಪ್ರ ಕನ್ನಡ ಶೈಲಿಯ ಊಟ, ವಿವಿಧ ಖಾದ್ಯಗಳು, ಸೆಲ್ಪಿ ಪಾಯಿಂಟ್, ಪಕ್ಕದ ಹೊಳೆಯಲ್ಲಿ ಬೋಟಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.
ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು, ಪ್ರಥ್ವಿ ಕ್ರೀಡಾ ಮತು ಯುವಕ ಸಂಘ ರಿ. ಬೈಂದೂರು, ಫ್ರೆಂಡ್ಸ್ ಕ್ಲಬ್ ಉಪ್ಪುಂದ, ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸಹಯೋಗ ನೀಡಿದ್ದು, ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಚಾಲನೆ ನೀಡಿದ ಬಳಿಕ ನೇರವಾಗಿ ಸ್ಪರ್ಧೆಗಳು ಆರಂಭಗೊಳ್ಳಲಿದೆ ಎಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮುಂದಾಳು ಹಾಗೂ ಉದ್ಯಮಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.