ಬೈಂದೂರು: ಕುಂದಾಪ್ರ ಕನ್ನಡವೆಂಬುದು ಕನ್ನಡದ ವಿಶಿಷ್ಟ ಭಾಷಾ ಪ್ರಕಾರವಾಗಿದೆ. ಭಾಷೆಯ ಅಭಿಮಾನ ಎಲ್ಲಾ ಭಾವನೆಗಳನ್ನು ಮೀರಿ ಒಂದುಗೂಡಿಸುವಂತಿದ್ದರೆ ಅದು ವಿಶಿಷ್ಟವಾದ ಅನುಭೂತಿಯೇ ಸರಿ. ಕುಂದಾಪ್ರ ಕನ್ನಡ ಭಾಷೆ ಆಡುಭಾಷೆಯಾಗಿರುವುದರ ಜೊತೆಗೆ ದಾಖಲಿಕರಣ ಕಾರ್ಯವೂ ಹೆಚ್ಚೆಚ್ಚು ನಡೆಯಲಿ ಎಂದು ಹಿರಿಯ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು ಅವರು ಉಪ್ಪುಂದ ಶಂಕರ ಕಲಾಮಂದಿರದಲ್ಲಿ ನಡೆದ ’ಗಮ್ಮತ್ತ್’ ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿ ಕರಾವಳಿಯ ಜನರಿಗೆ ವಿಶ್ವದಾದ್ಯಂತ ಮಾನ್ಯತೆ ಇದೆ. ಎಲ್ಲರೊಂದಿಗೂ ಹೊಂದಿಕೊಂಡು ಬದುಕುವ ಹಾಗೂ ವಿಶೇಷವಾದುದನ್ನು ಸಾಽಸುವ ಗುಣ ಕರಾವಳಿಗರಿಗೆ ಮೈಗೂಡಿದೆ ಎಂದರು.
ಬೈಂದೂರಿನ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಮಾತನಾಡಿ ಕಳೆದ ವರ್ಷದಂತೆ ಈ ವರ್ಷವೂ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗಮ್ಮತ್ತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಗಸ್ಟ್ 03ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯ ತನಕ ಯಡ್ತರೆ ನೆಲ್ಯಾಡಿ ಬೈಲ್ ಹಾಗೂ ಜೆಎನ್‌ಆರ್ ಕಲಾಮಂದಿರದಲ್ಲಿ ದಿನವಿಡಿ ಕಾರ್ಯಕ್ರಮಗಳು ಜರುಗಲಿದೆ. ಈ ಬಾರಿ ಇನ್ನಷ್ಟು ಕ್ರೀಡೆ, ಸಾಹಿತಿಕ ಕಾರ್ಯಕ್ರಮಗಳು ಜರುಗಲಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಬೇಕಿದೆ ಎಂದರು.
ಉದ್ಯಮಿಎನ್. ದಿವಾಕರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ತಾಲೂಕು ಘಟಕ ಅಧ್ಯಕ್ಷ ಅರುಣ್‌ಕುಮಾರ್ ಶಿರೂರು, ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯದರ್ಶಿ ಸುನೀಲ್ ಬೈಂದೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಇವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.