ಶಿರೂರು: ಬ್ಲಾಕ್ ಕಾಂಗ್ರೆಸ್ ಬೈಂದೂರು ಇದರ ವತಿಯಿಂದ 9/11, ಆಕ್ರಮ -ಸಕ್ರಮ ಅರ್ಜಿ ತಿರಸ್ಕಾರ,ಪಿಂಚಣಿ ರದ್ದತಿ,ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆ ಸೋಮವಾರ ಶಿರೂರು ಗ್ರಾಮ ಪಂಚಾಯತ್ ಎದುರು ನಡೆಯಿತು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಸರಕಾರ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ.ಹಿಂದೂತ್ವದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿಗರ ನಿಜ ಬಣ್ಣ ಕರಾವಳಿ ಜನರಿಗೆ ಸತ್ಯದರ್ಶನವಾಗಿದೆ.ಆಕ್ರಮ ಗೋ ಸಾಗಾಟದಲ್ಲಿ ಬಿಜೆಪಿ ನಾಯಕರು ಶಾಮೀಲಾಗುವ ಜೊತೆಗೆ ಬಿಜೆಪಿ ಮುಖಂಡರ ನಂಗಾನಾಚ್ ಬಗ್ಗೆ ತುಟಿಬಿಚ್ಚುತ್ತಿಲ್ಲ. ಅಭಿವೃದ್ದಿ ಕಾರ್ಯಗಳಿಗೆ ಕಾಂಗ್ರೆಸ್ ಹಸ್ತಕ್ಷೇಪ ಮಾಡಿಲ್ಲ.ಜಿ.ಎಸ್.ಟಿ ತೆರಿಗೆ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆಯಲಾಗಿದೆ.ಬಡವರ ಪರ ಇರುವ ಆಶ್ರಯ ಯೋಜನೆ,ಆರಾಧನ,ಆಕ್ರಮ -ಸಕ್ರಮ,94/c, ಪಿಂಚಣಿ ಮುಂತಾದ ಯೋಜನೆಗಳು ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ಬಂದಿದೆ.ಬಿಜೆಪಿ ನಾಯಕರು ಕಾಂಗ್ರೆಸ್ ಕುರಿತು ಮಾತನಾಡುವ ನೈತಿಕತೆ ಇಲ್ಲಾ ಎಂದರು.
ಶಾಸಕರ ನಡೆ ವಿರುದ್ದ ಶೀಘ್ರದಲ್ಲಿ ಪ್ರತಿಭಟನೆ: ಬೈಂದೂರು ಕ್ಷೇತ್ರಕ್ಕೆ ಆಘಾದವಾದ ರಾಜಕೀಯ ಹಿನ್ನೆಲೆಯಿದೆ.ಈ ಕ್ಷೇತ್ರವನ್ನು ಪ್ರತಿನಿಧಿಸಿದ ಪ್ರತಿ ಶಾಸಕರು ಒಂದಿಷ್ಟು ಬದ್ದತೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.ಆದರೆ ಈ ಬಾರಿಯ ಬಿಜೆಪಿ ಶಾಸಕರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಕ್ಷೇತ್ರದ ಜನರಿಗೆ ಅನುಕೂಲವಾಗಲು ಶಾಸಕರ ಕಛೇರಿಯನ್ನು ಬೈಂದೂರಿನಲ್ಲಿ ಸ್ಥಾಪಿಸಲಾಗಿದೆ.ಆದರೆ ಶಾಸಕರು ಮಾತ್ರ ಉಪ್ಪುಂದದ ಪಕ್ಷದ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಾರೆ.ಖಾಸಗಿ ಕಛೇರಿಯಲ್ಲಿ ಸಂಜೀವಿನಿ ಸೇರಿದಂತೆ ಸರಕಾರಿ ಅಧಿಕಾರಿಗಳ ಸಭೆ ನಡೆಸುವುದು ಸರಿಯಲ್ಲ.ಇದು ಮುಂದುವರಿದರೆ ಶಾಸಕರ ನಡೆ ವಿರುದ್ದ ಶೀಘ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮಾಜಿ ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ,ಶೇಖರ ಪೂಜಾರಿ ಉಪ್ಪುಂದ,ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗೌರಿ ದೇವಾಡಿಗ,ಯುವ ಕಾಂಗ್ರೆಸ್‌ಅಧ್ಯಕ್ಷ ಭರತ್ ದೇವಾಡಿಗ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ,ಮುಖಂಡರಾದ ರಘುರಾಮ ಶೆಟ್ಟಿ,ಮುಖಂಡರಾದ ರಘುರಾಮ ಕೆ.ಪೂಜಾರಿ,ಉದಯ ಪೂಜಾರಿ,ಪ್ರಸನ್ನ ಕುಮಾರ್ ಶೆಟ್ಟಿ,ಮುಕ್ರಿ ಅಲ್ತಾಫ್,ಮಹ್ಮದ್ ಗೌಸ್,ದಿಲ್‌ಶಾದ ಬೇಗಂ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ ಕಾರ್ಯಕ್ರಮ ನಿರೂಪಿಸಿದರು.ಜಗದೀಶ ದೇವಾಡಿಗ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು