ಬೈಂದೂರು: ಕೇವಲ ಒಂದು ವರ್ಷದ ಹಿಂದಿನ ಘಟನೆ.ಕಾಲ್ತೋಡು ಗ್ರಾಮದ ಕುಗ್ರಾಮದ ಪುಟ್ಟ ಬಾಲಕಿ ಶಾಲೆಯಿಂದ ಹಿಂದಿರುವ ವೇಳೆ ನೀರಿನ ಅಬ್ಬರಕ್ಕೆ ನದಿ ಪಾಲಾಗಿದ್ದಳು.ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು ಸರಕಾರ,ಅಧಿಕಾರಿಗಳು ಸಾಲು ಸಾಲಾಗಿ ಸಾಂತ್ವನದ ಜೊತೆಗೆ ಶೀಘ್ರ ಬೈಂದೂರಿನ ಗ್ರಾಮೀಣ ಭಾಗದ ಕಾಲು ಸಂಕಗಳ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದೆಲ್ಲಾ ಭರವಸೆ ನೀಡಿದರು.ಈ ಬಾರಿಯ ಮಳೆಗಾಲದ ಅವಧಿಗೆ ಮುನ್ನ ಬಂದುಬಿಟ್ಟಿದೆ.ನದಿ,ಕೆರೆಗಳು ತುಂಬುವ ಹಂತದಲ್ಲಿದೆ ಆದರೆ ಬೈಂದೂರು ಭಾಗದ ಬಹುತೇಕ ಗ್ರಾಮೀಣ ಭಾಗಗಳು ಕಾಲು ಸಂಕದ ಕನವರಿಕೆಯಲ್ಲೆ ಬೇಸಿಗೆ ಕಳೆದುಬಿಟ್ಟಿದೆ.ಇಲಾಖೆ,ಜನಪ್ರತಿನಿಧಿಗಳು ಪರಸ್ಪರ ಒಬ್ಬರಿಗೊಬ್ಬರನ್ನು ಬೆರಳು ತೋರಿಸಲು ಆರಂಭಿಸಿದ್ದಾರೆ.ಮಕ್ಕಳ ಪಾಲಕರಿಗೆ ಮಾತ್ರ ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದೆ ಆತಂಕವಾಗಿದೆ.
ಹತ್ತಾರು ವರ್ಷಗಳಿಂದ ಸಾಕಾರಗೊಳ್ಳದ ಭರವಸೆಗಳು: ಬೈಂದೂರು ಭಾಗದಲ್ಲಿ ಕಾಲುಸಂಕದ ಸಮಸ್ಯೆ ಇಂದು ನಿನ್ನೆಯದಲ್ಲ.ಹತ್ತಾರು ವರ್ಷಗಳಿಂದ ಬಹುತೇಕ ಕಡೆ ಇದರ ಬೇಡಿಕೆಯಿತ್ತು.ಯಡ್ತರೆ ಗ್ರಾಮದ ಗಂಗನಾಡು,ನಿರೋಡಿ,ಕಾಲ್ತೋಡು ಭಾಗದ ಹೊಸೇರಿ,ಸಾಂತೇರಿ,ವಸ್ರೆ,ಬ್ಯಾಟಿಯಾಣಿ,ಮಧುಕೊಡ್ಲು,ಚಪ್ಪರಕಿ,ಕಪ್ಪಾಡಿ,ಮುರೂರು,ಗುಂಡುಬಾಣ ಮುಂತಾದ ಕಡೆ ಬಹುತೇಕ ಮನೆಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದರೆ ನದಿದಾಟಿ ಬರಬೇಕು.ಇಲ್ಲವಾದರೆ ಹತ್ತಾರು ಕಿ.ಮೀ ಸುತ್ತು ಬಳಸಿ ಬರಬೇಕಾಗಿದೆ.ಒಂದೆಡೆ ಕೃಷಿ ಚಟುವಟಿಕೆ ಇದರ ನಡುವೆ ನಿಗಧಿತ ಸಮಯಕ್ಕೆ ಮಕ್ಕಳನ್ನು ಶಾಲೆಗೆ ಕರೆತರಬೇಕಾದ ಜವಬ್ದಾರಿ ಹೀಗಾಗಿ ಮಕ್ಕಳು ಮನೆಗೆ ಬರುವವರೆಗೆ ಪಾಲಕರ ಆತಂಕದಿಂದ ದಿನ ಕಳೆಯಬೇಕಾಗಿದೆ.ಹಾಗಂತ ಶಾಲೆಗೆ ಕಳುಹಿಸದಿರಲು ಸಾಧ್ಯವಿಲ್ಲ.ಈ ಭಾಗದ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳು ಮರದ ಕೊಂಬೆ ಮೇಲೆ ಮಕ್ಕಳನ್ನು ಕಳುಹಿಸುವ ಸರ್ಕಸ್ ಸ್ಥಳೀಯರಿಗೆ ಸರ್ವೆ ಸಾಮಾನ್ಯವಾಗಿದೆ.ಆದರೆ ಇಲಾಖೆ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.ಕಾಲ್ತೋಡು ಸಮೀಪ ಕಳೆದ ವರ್ಷ ಮಗು ಕೊಚ್ಚಿ ಹೋದ ಬಳಿಕ ಆ ಭಾಗದಲ್ಲಿ ಒಂದು ಕಾಲುಸಂಕ ನಿರ್ಮಾಣಗೊಂಡಿದೆ.ಉಳಿದ ಕಡೆ ಇದುವರೆಗೆ ಕೆಲಸ ನಡೆದಿಲ್ಲ.ಅಪಾಯ ನಡೆದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಜಾಗೃತೆ ವಹಿಸಬೇಕಾಗಿದೆ.
ಸ್ಥಳೀಯರಿಂದ ಕಾಲುಸಂಕದ ಕಾಮಗಾರಿ: ಇಲ್ಲಿನ ಸಾತೇರಿ,ಹೊಸೇರಿ ಭಾಗದಲ್ಲಿ ಸರಕಾರ ಗಮನಹರಿಸದ ಪರಿಣಾಮ ಸ್ಥಳೀಯರು ಶ್ರಮದಾನದ ಮೂಲಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ.ಮರದ ದಿಮ್ಮಿಗಳಿಂದ ನಿರ್ಮಿಸಿದ ಈ ತಾತ್ಕಾಲಿಕ ಕಾಲು ಸಂಕ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಮಕ್ಕಳ ಭವಿಷ್ಯದ ಜೊತೆಗೆ ಇಂತಹ ಅಪಾಯಕಾರಿ ವಿಚಾರಗಳಿಗೆ ಜಿಲ್ಲಾಡಳಿತ ಸ್ಪಂಧಿಸದಿರುವುದು ಆತಂಕಕ್ಕೆ ಒಳಪಡುವ ವಿಚಾರವಾಗಿದೆ.ಕೇವಲ ಆಶ್ವಾಸನೆ ನೀಡುವುದು ಬಿಟ್ಟರೆ ಕಾಮಗಾರಿ ನಡೆದಿಲ್ಲ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.ಜಿಲ್ಲಾಡಳಿತ ಗ್ರಾಮೀಣ ಭಾಗದ ಜನರ ಆಶೋತ್ತರಗಳಿಗೆ ಒಂದಿಷ್ಟು ಸ್ಪಂಧಿಸಬೇಕಿದೆ.
ಹೇಳಿಕೆ.1
ಕಳೆದ ಹಲವು ವರ್ಷಗಳಿಂದ ಕಾಲುಸಂಕ ನಿರ್ಮಿಸಲು ಶಾಸಕರಿಗೆ ,ಜನಪ್ರತಿನಿಧಿಗಳಿಗೆ ,ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು.ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಮಸ್ಯೆಯಾಗುತ್ತಿದೆ.ಸರಕಾರ ಇಲ್ಲಿನ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಬೇಕಿದೆ…………ಆನಂದ ಪೂಜಾರಿ.ಗ್ರಾಮಸ್ಥರು.