ಬೈಂದೂರು: ಸಮಾಜದಲ್ಲಿ ಉಳ್ಳವರು ಅನೇಕ ಜನ ಇರುತ್ತಾರೆ. ಉಳ್ಳವರೆಲ್ಲರಿಗೂ ದಾನ ಮಾಡುವ ಮನಸ್ಸು ಬಹಳ ಕಡಿಮೆ.ನಮ್ಮಲ್ಲಿರುವ ಸಂಪತ್ತಿನ ಒಂದಂಶವನ್ನು ದಾನ ಮಾಡುವುದರಿಂದ ಸಂತೃಪ್ತಿಯ ಜೊತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ ಎಂದು ಶ್ರೀನಾರಾಯಣ ಗುರು ಮಹಾ ಸಂಸ್ಥಾನ ನಿಟ್ಟೂರಿನ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು ಅವರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ ಇದರ ವತಿಯಿಂದ ಸೂರ್ಕುಂದದಲ್ಲಿ ನಿರ್ಮಾಣಗೊಂಡ 15ನೇ ಮನೆಯನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮಗೆ ಸಾಮರ್ಥ್ಯ ಇರುವಾಗ ಒಂದಿಷ್ಟು ಕೊಡುಗೆಗಳನ್ನು ಸಮಾಜಕ್ಕೆ ನೀಡಿದಾಗ ಸಂತೃಪ್ತಿ ಮೂಡುತ್ತದೆ.ಈಗಾಗಲೇ ಬೈಂದೂರು ವ್ಯಾಪ್ತಿಯಲ್ಲಿ ಟ್ರಸ್ಟ್ ಹಾಗೂ ವಯಕ್ತಿಕ ನೆಲೆಯಲ್ಲಿ ಅನೇಕ ಮನೆ ನಿರ್ಮಾಣ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ.ಟ್ರಸ್ಟ್ ಮೂಲಕ ನಿರ್ಮಿಸಲಾಗಿರುವ 15ನೇ ಮನೆ ಇದಾಗಿದೆ.ಮತ್ತಷ್ಟು ಕಾರ್ಯಗಳು ಟ್ರಸ್ಟ್ ಮೂಲಕ ನಡೆಯಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸತ್ಯಜಿತ್ ಸುರತ್ಕಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಸುಬ್ರಾಯ ನಂದೋಡಿ,ವೆಂಕಟರಮಣ ಶೇರುಗಾರ್ ಬಿಜೂರು,ಮನೆಯವರಾದ ಪರಶುರಾಮ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಯವರನ್ನು ಸಮ್ಮಾನಿಸಲಾಯಿತು ಹಾಗೂ ಮನೆಯ ಯಜಮಾನಿಗೆ ಮನೆಯ ಕೀ ಹಸ್ತಾಂತರಿಸಲಾಯಿತು.
ರತ್ತುಬಾಯಿ ಜನತಾ ಫ್ರೌಢಶಾಲೆಯ ಮುಖ್ಯ ಶಿಕ್ಷಕ ಆನಂದ ಮದ್ದೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ವರಲಕ್ಷ್ಮೀ ಸೊಸೈಟಿ ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ ಪಿ.ಯಡ್ತರೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು