ಬೈಂದೂರು: ಬೈಂದೂರು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಹಮ್ಮಿಕೊಂಡಿರುವ ಬ್ರಹತ್ ಮಹಿಳಾ ಸಮಾವೇಶ ಕಿರಿಮಂಜೇಶ್ವರದಲ್ಲಿ ನಡೆಯಿತು.
ಶಿವಮೊಗ್ಗ ಲೋಕಸಭಾ ಸಂಸದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೇಂದ್ರದ ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಸರಕಾರ ಸಮರ್ಥ ಆಡಳಿತ ನೀಡುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿಷ್ಠಿತವಾಗಿ ಗುರುತಿಸುವಂತೆ ಮಾಡಿದೆ.ಸ್ವಚ್ಚ ಭಾರತ್ ಹೆಸರಿನಲ್ಲಿ ಹನ್ನೆರಡು ಕೋಟಿ ಶೌಚಾಲಯ,ನಾಲ್ಕು ಕೋಟಿ ಮನೆ ನಿರ್ಮಾಣ ಹಾಗೂ ಹತ್ತು ಕೋಟಿ ಕುಟುಂಬಗಳಿಗೆ ಎಲ್.ಪಿ.ಜಿ ಸಂಪರ್ಕ ನೀಡಿದೆ.ಕೊಲ್ಲೂರು ಕಾರಿಡಾರ್‌ನಂತಹ ಮಹತ್ವಕಾಂಕ್ಷೆಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ಬೈಂದೂರಿಗೆ ಕರೆತರುವ ಮೂಲಕ ಸಾಕಾರಗೊಳಿಸಲು ಜನತೆಯ ಆಶೀರ್ವಾದ ಬೇಕಿದೆ.ಈ ಚುನಾವಣೆ ದೇಶದ ಭವಿಷ್ಯ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರ ವಿರೋಧಿ ಚಟುವಟಿಕೆ ನಡುವಿನದ್ದಾಗಿದೆ.ಹೀಗಾಗಿ ಸಮೃದ್ದ ಬೈಂದೂರು ಮತ್ತು ಸಮರ್ಥ ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿಯನ್ನು ಬೆಂಬಲಿಸಿ ಗೆಲ್ಲಿಸಬೇಕು.ರಾಜ್ಯ ಸರ್ಕಾರ ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇಂತಹ ಸರ್ಕಾರ ಅಧಿಕಾರದಲ್ಲಿ ಇರಬೇಕಾ ಎಂಬುದನ್ನು ನಮ್ಮ ಮತದಾರರು ಯೋಚಿಸಬೇಕಾಗಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯನವರು ಇಂದು ಕೇವಲ 5 ಕೆ.ಜಿ ಅಕ್ಕಿ ಕೊಡುತ್ತಿದ್ದಾರೆ.ಈ ಅಕ್ಕಿಯೂ ಸಹ ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿರುವ ಅಕ್ಕಿಯಾಗಿದೆ.
ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದೆ. ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಪ್ರತಿವರ್ಷ ಒಂದು ಲಕ್ಷ ನೀಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ಅರವತ್ತು ಲಕ್ಷ ಮಹಿಳೆಯರಿದ್ದಾರೆ. ಅವರೆಲ್ಲರಿಗೂ ಒಂದು ಲಕ್ಷ ಹಣ ನೀಡಿದರೆ ಪ್ರತಿ ವರ್ಷ ಅರವತ್ತು ಲಕ್ಷ ಕೋಟಿ ಹಣ ಬೇಕಾಗುತ್ತದೆ. ಹಾಗಾದರೆ ನಮ್ಮ ದೇಶದ ಬಜೆಟ್ ಇರುವುದೇ ನಲವತೈದು ಲಕ್ಷ ಕೋಟಿ ಕುಟುಂಬದ ಓರ್ವ ಹೆಣ್ಣು ಮಗಳಿಗೆ ಒಂದು ಲಕ್ಷ ನೀಡಿದರೂ ಸಹ ಮೊವತ್ತೆರಡು ಲಕ್ಷ ಕೋಟಿ ಹಣ ಬೇಕಾಗುತ್ತದೆ. ಯಾವುದೇ ಅಂಕಿ ಸಂಕಿಯಿಲ್ಲದೇ ಕೇವಲ ಬೊಗಳೆ ಬಿಡುತ್ತಾ ಅಧಿಕಾರವನ್ನು ಹಿಡಿಯುವ ಸಲುವಾಗಿ ಮತದಾರರಿಗೆ ಇಲ್ಲ ಸಲ್ಲದ ಆಮಿಷಗಳನ್ನು ಒಡ್ಡುತ್ತಿದೆ.ಚುನಾವಣೆ ಬಳಿಕ ಕಾಂಗ್ರೆಸಿಗರಿಗೆ ಜನರೆ ಚೊಂಬು ನೀಡಲಿದ್ದಾರೆ ಎಂದರು.
ಚಲನಚಿತ್ರ ನಟಿ ಶ್ರುತಿ ಮಾತನಾಡಿ ಓಟಿಗಾಗಿ ಬಿಟ್ಟಿ ಭಾಗ್ಯ ನೀಡುತ್ತಿರುವ ರಾಜ್ಯ ಸರ್ಕಾರ ಜನ ಸಾಮಾನ್ಯರನ್ನು ವಂಚಿಸುತ್ತಿದೆ. ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಹೆಮ್ಮೆ ಬಿಜೆಪಿಯದ್ದು, ಇಂತಹ ಮಹಿಳೆಯ ಬಗ್ಗೆ ಹಾಗೂ ನಮ್ಮ ಪ್ರಧಾನ ಮಂತ್ರಿ ಮೋದಿಯ ಬಗ್ಗೆ ಸಿದ್ದರಾಮಯ್ಯನವರು ಹಗುರವಾಗಿ ಮಾತನಾಡುತ್ತಾರೆ. ಅದೇ ರೀತಿ ಅವರ ಪಕ್ಷದ ಸೋನಿಯಾ ಗಾಂಧಿ ಬಗ್ಗೆ ಹಾಗೂ ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆಯೇ? ದೇಶದ ಹಿತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಬೈಂದೂರಿನ ಸಮಗ್ರ ಅಭಿವೃದ್ದಿಯಾಗಬೇಕಾದರೆ ಹಾಗೂ ಬೈಂದೂರು ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕಾದರೆ ರಾಘಣ್ಣ ಮತ್ತೊಮ್ಮೆ ಸಂಸದರಾಗಲೇಬೇಕು.ಈ ಕ್ಷೇತ್ರ ಜನತೆಗೆ ವರಾಹಿಯಿಂದ ಸಿಹಿ ನೀರನ್ನು ಕುಡಿಸುವ ಯೋಜನೆ ಜಾರಿಗಾಗಿ ರಾಘಣ್ಣ ಇನ್ನೊಮ್ಮೆ ಸಂಸತ್ತಿಗೆ ಆಯ್ಕೆಯಾಗಲೇಬೇಕಿದೆ. ಕ್ಷೇತ್ರದ ಮತದಾರರು ಒಂದು ಲಕ್ಷಕ್ಕೂ ಅಂತರದ ಮತವನ್ನು ರಾಘಣ್ಣರಿಗೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ,ಶಿವಮೊಗ್ಗ ಬಿಜೆಪಿ ಉಪಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು, ಬಿ.ಎಸ್. ಯಡಿಯೂರಪ್ಪ ಪುತ್ರಿ ಅರುಣಾದೇವಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಚುನಾವಣಾ ಉಸ್ತುವಾರಿ ಅಶೋಕ ಮೂರ್ತಿ,ಉಮಾದೇವಿ,ಶಿಲ್ಪಾ ಸುವರ್ಣ,ಸಂದ್ಯಾ ರಮೇಶ,ಶೋಭಾ ಪುತ್ರನ್,ಮಹಿಳಾ ಮೋರ್ಚದ ಶ್ಯಾಮಲ ಕುಂದರ್,ದೀಪಾ ಶೆಟ್ಟಿ,ಸದಾನಂದ ಉಪ್ಪಿನಕುದ್ರು,ಬೈಂದೂರು ಬಿಜೆಪಿ ಮಂಡಲದ ಕಾರ್ಯದರ್ಶಿ ಮಹೇಂದ್ರ ಪೂಜಾರಿ,ಉಮೇಶ ಶೆಟ್ಟಿ ಕಲ್ಗದ್ದೆ,ಗಾಯತ್ರಿ,ಮಂಗಳಾ,ಗ್ರಾ.ಪಂ ಅಧ್ಯಕ್ಷ ಶೇಖರ ಖಾರ್ವಿ,ಸುರೇಶ ಬಟ್ವಾಡಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಅನಿತಾ ಕೆ.ಆರ್ ವಂದಿಸಿದರು.
News/Giri shiruru