ಬೈಂದೂರು: 60 ವರ್ಷ ಗರೀಬಿ ಹಠಾವೋ ಎಂದರವರು ತಮ್ಮ ಹೆಂಡತಿ ಮಕ್ಕಳ ಬಡತನ ದೂರ ಮಾಡಿದರೇ ಹೊರತು ಬಡವರ ಬಡತನ ದೂರ ಮಾಡಿಲ್ಲ. ಬಡವರ ಬಡತನ ದೂರ ಮಾಡಲು ಪ್ರಧಾನಿಯಾಗಿ ನರೇಂದ್ರ ಮೋದಿಯವರೇ ಬರಬೇಕಾಯಿತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಯ ಮೂಲಕ ಕೇಂದ್ರ ಸರ್ಕಾರ ಬಡವರಿಗೆ ಉಚಿತ ಅಕ್ಕಿ ನೀಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿಯೂ ಆದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ತಗ್ಗರ್ಸೆ ಗುಡ್ಡಿಯಂಗಡಿಯಲ್ಲಿ ಸೋಮವಾರ ಸಂಜೆ ನಡೆದ ಎಸ್.ಟಿ. ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 67 ವರ್ಷ ಆಡಳಿತ ನಡೆದಿ ಕಾಂಗ್ರೆಸ್ ದೇಶದ ಜನರ ಬಡತನ ದೂರ ಮಾಡಿಲ್ಲ. ಬಡವರನ್ನು ಬಡವರಾಗಿಯೇ ಇರುವಂತೆ ನೋಡಿದ್ದಾರೆ. ಬಡವರ ಮಕ್ಕಳಿಗೆ ವಿದ್ಯಾಭ್ಯಾಸ, ಹೊಟ್ಟೆಗೆ ಹಿಟ್ಟು ನೀಡುವ ಕಾರ್ಯವನ್ನು ಮಾಡಿಲ್ಲ ಎಂದು ಕಿಡಿಕಾರಿದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡಕುಟ್ಟು ಜನಾಂಗವನ್ನು ಗುರುತಿಸಿ ವಾಲ್ಮೀಕಿ ಜಯಂತಿ ಮಾಡುವ ಮೂಲಕ ಆ ಸಮುದಾಯಕ್ಕೆ ಗೌರವ ಸಲ್ಲಿಸುವ ಕಾರ್ಯ ಆರಂಭಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ, ಅಭಿವೃದ್ಧಿಗಾಗಿ ಸಾವಿರಾರೂ ಕೋಟಿ ರೂಪಾಯಿ ಅನುದಾನ ನೀಡಿದರು ಎಂದು ಹೇಳಿದರು.ಕಾಂಗ್ರೆಸ್‌ನ ಖಾಲಿ ಚೊಂಬನ್ನು ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ದೇಶವನ್ನು ಸುದೀರ್ಘ ವರ್ಷ ಆಡಳಿತ ನಡೆಸಿ ದೇಶದ ಜನತೆಗೆ ಖಾಲಿ ಚೊಂಬು ನೀಡಿತ್ತು. ಕಳೆದ ಹತ್ತು ವರ್ಷದ ಹಿಂದೆ ಆಡಳಿತಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ. ದೇಶದ ಮಹಿಳೆಯರಿಗೆ ಗೌರವ ತಂದುಕೊಡಲು 12 ಕೋಟಿ ಶೌಚಾಲಯ ನಿರ್ಮಿಸಿದ್ದಾರೆ. 10 ಕೋಟಿ ಕುಟುಂಬಕ್ಕೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಿದ್ದಾರೆ. ಬೈಂದೂರು ಸೇರಿದಂತೆ ಕ್ಷೇತ್ರದ 2.61 ಲಕ್ಷ ಜನರಿಗೆ ಆಯುಷ್ಮಾನ್ ಯೋಜನೆಯಡಿ 260 ಕೋಟಿ ರೂಪಾಯಿ ಆಸ್ಪತ್ರೆ ಬಿಲ್‌ಗಳನ್ನು ನರೇಂದ್ರ ಮೋದಿ ಸರ್ಕಾರ ಪಾವತಿಸಿದೆ ಎಂದರು.
ದೇಶದಲ್ಲಿ ಒಟ್ಟು ಪರಿಶಿಷ್ಟ ಜಾತಿಗೆ ಸಂಬಂದಿಸಿದ 84 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 56 ಕ್ಷೇತ್ರದಲ್ಲಿ ಗೆದ್ದಿದೆ, ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ 47 ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಗೆದ್ದಿದೆ. ಕಳೆದ ಬಾರಿ ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಸಿಕ್ಕಿರಲಿಲ್ಲ. ದೇಶದ 543 ಲೋಕಸಭಾ ಕ್ಷೇತ್ರದಲ್ಲಿ 48 ಕ್ಷೇತ್ರ ಗೆಲ್ಲಲು ಕಾಂಗ್ರೆಸ್‌ಗೆ ಆಗಿರಲಿಲ್ಲ. ಈ ಬಾರಿಯೂ ಅದೇ ದುಸ್ಥಿತಿಗೆ ಕಾಂಗ್ರೆಸ್ ತಲುಪಲಿದೆ. ಬಿಜೆಪಿ 400ಕ್ಕೂ ಅಧಿಕ ಕ್ಷೇತ್ರದಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ನಟಿ ಶ್ರುತಿ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಮುಖಂಡರಾದ ರಾಮ ನಾಯ್, ಪ್ರಿಯದರ್ಶಿನಿ ದೇವಾಡಿಗ, ಕೃಷ್ಣಪ್ರಸಾದ್ ಅಡ್ಯಂತಾಯ ಸಹಿತ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಗರು ಸೇರಿದ್ದರು.