ಬೈಂದೂರು: ಈಗಾಗಲೇ ಟಾಸ್ಕ್‌ಪೋರ್ಸ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಸಭೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ.ಅಧಿಕಾರಿಗಳಿಂದ ಕೂಡ ಮಾಹಿತಿ ಪಡೆಯಲಾಗಿದೆ.ಪ್ರತಿ ಗ್ರಾಮದಲ್ಲೂ ಈ ಹಿಂದೆ ಕಂಡು ಬಂದಿರುವ ವ್ಯಾಪ್ತಿ ಮಾಹಿತಿ ಜೊತೆಗೆ ಬೇಸಿಗೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಬೇಕಾಗುವ ಎಲ್ಲಾ ಸಿದ್ದತೆಗಳನ್ನು ಸಂಬಂಧಪಟ್ಟ ಗ್ರಾ.ಪಂ ಮಾಡಿಕೊಳ್ಳಲು ತಿಳಿಸಲಾಗಿದೆ.ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾದಲ್ಲಿ ನೇರ ಅಧಿಕಾರಿಗಳು ಹೊಣೆಗಾರರಾಗುತ್ತಾರೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದರು ಅವರು ಬೈಂದೂರು ಆಡಳಿತ ಸೌಧದಲ್ಲಿ ನಡೆದ ಕುಡಿಯುವ ನೀರಿನ ಕುರಿತು ಅಧಿಕಾರಿಗಳೊಂದಿಗೆ ವಿಶೇಷ ಸಭೆಯಲ್ಲಿ ಮಾತನಾಡಿ ಕಳೆದ ಮೂರು ವರ್ಷದಲ್ಲಿ ಕೊರತೆಯಾಗಿರುವ ಮಾಹಿತಿ ಕಲೆ ಹಾಕಿ ಈ ವರ್ಷ ನೀರಿನ ಸಮಸ್ಯೆ ಕಂಡುಬರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ತಿಳಿಸಿದರು.
ತಾಲೂಕು ಕಛೇರಿಯಲ್ಲಿ ಮದ್ಯವರ್ತಿಗಳ ಹಾವಳಿ ನಿಲ್ಲಬೇಕು: ಬೈಂದೂರು ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯರು ನೇರವಾಗಿ ಬಂದರೆ ಕೆಲಸಗಳು ಆಗುತ್ತಿಲ್ಲ.ಮದ್ಯವರ್ತಿಗಳಿಗೆ ತಕ್ಷಣ ಕೆಲಸವಾಗುತ್ತದೆ.ಹೀಗಾಗಿ ಮದ್ಯವರ್ತಿಗಳ ಹಾವಳಿ ನಿಲ್ಲಬೇಕು ಎಂದು ಸಾರ್ವಜನಿಕರು ಶಾಸಕರಿಗೆ ತಿಳಿಸಿದರು.ಇದೆಕ್ಕೆ ಪ್ರತಿಕ್ರಯಿಸಿದ ಶಾಸಕರು ಇನ್ನು ಮುಂದೆ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.ಜನಸಾಮಾನ್ಯರಿಗೆ ಸರಕಾರದ ಸವಲತ್ತುಗಳನ್ನು ನೇರವಾಗಿ ದೊರೆಯಬೇಕು.ಕಛೇರಿಯಲ್ಲಿರುವ ಸಿ.ಸಿ ಕ್ಯಾಮರಾಗಳ ಮೂಲಕ ನಿಗಾವಹಿಸಿ ಎಜೆಂಟರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಅಧಿಕಾರಿಗಳ ಸಭೆಯಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ,ಸಣ್ಣ ನೀರಾವರಿ ಇಲಾಖೆಯ ರಾಜ್‌ಕುಮಾರ್,ಎಲ್ಲಾ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾ.ಪಂ ಅಧ್ಯಕ್ಷರುಗಳು ಹಾಜರಿದ್ದರು.
News/Giri shiruru