ಬೈಂದೂರು; ಕರಾವಳಿಯಲ್ಲಿಯೇ ಮಾದರಿ ಮೂಕಾಂಬಿಕಾ ರೋಡ್ ಬೈಂದೂರು ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಕಾರ್ಯಗತವಾಗಲಿದೆ ಎಂದು ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಗೌರವಾಧ್ಯಕ್ಷ ವೆಂಕಟೇಶ ಕಿಣಿ ಬೈಂದೂರು ಹೇಳಿದರು.ಅವರು ಆ.28 ರಂದು ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಂಸದ ಬಿ.ವೈ.ರಾಘವೇಂದ್ರ ಅವರು ಕೊಲ್ಲೂರಿನ ಪುರಾತನ ಹಾಗೂ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಿ, ಮೂಕಾಂಬಿಕಾ ಕಾರಿಡಾರ್ ಯೋಜನೆಯಡಿ ಮೂಕಾಂಬಿಕಾ ರೋಡ್ ಬೈಂದೂರು ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಅನಿವಾರ್ಯಯತೆ ಕುರಿತು ಮಾಹಿತಿ ನೀಡಿದ್ದರು. ಈ ಎಲ್ಲ ಪ್ರಯತ್ನಗಳ ಫಲವಾಗಿ ಕರಾವಳಿ ಭಾಗದಲ್ಲಿ ಅತೀ ದೊಡ್ಡ ರೈಲ್ವೆ ನಿಲ್ದಾಣವಾಗಿಸಲು ಸುಮಾರು ರೂ.100 ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದರು.

ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶಾಲವಾದ ರೈಲು ನಿಲ್ದಾಣ ಕಟ್ಟಡ ನಿರ್ಮಾಣ, ಪಶ್ಚಿಮ ಭಾಗದಲ್ಲಿ ಒಂದು ಹಾಗೂ ಪೂರ್ವ ಭಾಗದಲ್ಲಿ ಎರಡು ಲೂಪ್ ಲೈನ್‌ಗಳನ್ನು ಒಳಗೊಂಡಂತೆ ಒಟ್ಟು ಮೂರು ಲೂಪ್ ಲೈನ್‌ಗಳನ್ನು ನಿರ್ಮಿಸಿ, ಅವುಗಳನ್ನು ಸಾಮಾನ್ಯ ಪ್ರಾಟ್‌ಫಾರ್ಮ್‌ಗೆ ಸಂಪರ್ಕಿಸುವುದು,ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ಪ್ಲಾಟ್‌ಫಾರ್ಮ್ಗಳ ಮೇಲೆ ಸೂಕ್ತವಾದ ಶೆಲ್ಮರ್‌ಗಳನ್ನು ನಿರ್ಮಿಸುವುದು. ಭಾರತೀಯ ಆಹಾರ ನಿಗಮ (Food Corporation of India) ಮುಂತಾದ ಸಂಸ್ಥೆಗಳ ಸರಕುಗಳ ಸಮರ್ಥ ನಿರ್ವಹಣೆಗಾಗಿ ಪ್ರತ್ಯೇಕ ಗೂಡ್ ಶೆಡ್ ಲೈನ್ ನಿರ್ಮಿಸುವುದು, ದೂರದ ಪ್ರಯಾಣ ಮಾಡುವ ರೈಲುಗಳು ಹಾಗೂ ಈ ನಿಲ್ದಾಣದಿಂದಲೇ ಆರಂಭವಾಗುವ ರೈಲುಗಳಿಗೆ ಸಾಕಷ್ಟು ನೀರಿನ ಪೂರೈಕೆ ಒದಗಿಸುವ ವ್ಯವಸ್ಥೆ ಕಲ್ಪಿಸುವುದು.ಪ್ರಯಾಣಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಉತ್ತರ ತುದಿಯಲ್ಲಿ ಒಂದು ಮತ್ತು ದಕ್ಷಿಣ ತುದಿಯಲ್ಲಿ ಮತ್ತೊಂದು ಸೇರಿದಂತೆ ಎರಡು FOBಗಳನ್ನು ಲಿಫ್ಟ್ ಸೌಲಭ್ಯದೊಂದಿಗೆ ನಿರ್ಮಿಸುವುದು. ಪ್ರಯಾಣಿಕರು ಮತ್ತು ಸಂದರ್ಶಕರ ಅಗತ್ಯಗಳಿಗೆ ಅನುಗುಣವಾಗಿ ಸಾಕಷ್ಟು ವಾರ್ಕಿಂಗ್ ಸ್ಥಳವನ್ನು ಕಲ್ಪಿಸುವುದು. ಸುಗಮ ವಾಹನ ಸಂಚಾರಕ್ಕಾಗಿ ರೈಲು ನಿಲ್ದಾಣಕ್ಕೆ ಸಂಪರ್ಕಿಸುವ ಉತ್ತರ ಮತ್ತು ದಕ್ಷಿಣ ಭಾಗದ ರಸ್ತೆಗಳ ಅಗಲೀಕರಣ ಮಾಡುವುದು. ಪ್ರಯಾಣಿಕರು ಸುರಕ್ಷಿತವಾಗಿ ಹಾಗೂ ಆರಾಮವಾಗಿ ನಡೆದುಹೋಗಲು ಅನುಕೂಲವಾಗುವಂತೆ ಪ್ಲಾಟ್ ಫಾರ್ಮ್ಗಳಿಗೆ ಪೇವರ್ ಫಿನಿಷಿಂಗ್ ನೀಡುವ ಕೆಲಸವಾಗಲಿದೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್,ಕಾರ್ಯದರ್ಶಿ ಪ್ರಕಾಶ ಪೂಜಾರಿ,ಸದಸ್ಯರಾದ ಸುಧಾಕರ,ವಿಜಯ್ ಹಾಜರಿದ್ದರು.

Leave a Reply

Your email address will not be published. Required fields are marked *

fourteen + 19 =