ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ ಬೈಂದೂರು ಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಈ ಭಾರಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕ್ರೀಡಾಕೂಟ ಕೆಸ್ರಲ್ಲೊಂದಿನ -ಗಮ್ಮತ್ತ್  ಕಾರ್ಯಕ್ರಮ ಅಗಸ್ಟ್ 23ರ ಭಾನುವಾರ ಬೆಳಿಗ್ಗೆ 9 ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಅದರ ಪಕ್ಕದ ಜೆ.ಎನ್.ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ  ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ ಹೇಳಿದರು ಅವರು ಗುರುವಾರ ಯಡ್ತರೆ ಜೆ.ಎನ್.ಆರ್ ಕಲಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕುಂದಾಪ್ರ ಸಂಸ್ಕ್ರತಿ ಸಂಪ್ರದಾಯ ಆಚರಣೆ ಇಂದು ಜಾಗತಿಕ ಮಟ್ಟದ ಹಿರಿಮೆ ಹೊಂದಿದೆ.ಮುಂದಿನ ತಲೆಮಾರಿಗೆ ಮರೆತು ಹೋದ ಆಚರಣೆಗಳ ಪರಿಚಯದ ಜೊತೆಗೆ ನಮ್ಮ ನೆಲ,ಮೂಲ ಆಚರಣೆಯ ಪ್ರಸ್ತುತಿ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.ಸಮಾನ ಮನಸ್ಕರ ತಂಡ ಒಂದುಗೂಡಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ಎರಡು  ವರ್ಷದಿಂದ ಅದ್ದೂರಿ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಸ್ಪರ್ಧೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದ್ದು, ವಿಜೇತರಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿದೆ.ಮೂರನೇ ವರ್ಷದ ಕಾರ್ಯಕ್ರಮದಲ್ಲಿ ಅದ್ದೂರಿ ಕಂಬಳ, ವಿವಿಧ ಪ್ರಾತ್ಯಕ್ಷಿಕೆ. ವಸ್ತು ಪ್ರದರ್ಶನ, ಹರಟೆ, ನೈಗಿಕೊಪ್ಪರಿಗೆ ವಿವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ 25ಕ್ಕೂ ಅಧಿಕ ಸ್ಪರ್ಧೆಗಳು ಇರಲಿದೆ ಎಂದರು.

ವೈಭವದ ಮೆರವಣಿಗೆ: ಅ.23ರ ಬೆಳಿಗ್ಗೆ 9 ಕ್ಕೆ ರಾಹುತನಕಟ್ಟೆಯಿಂದ ಜೆ.ಎನ್.ಆರ್ ಹಾಲ್ ತನಕ ವೈಭವದ ಮೆರವಣಿಗೆ ಇರಲಿದ್ದು, ಕಂಬಳ ಕೋಣಗಳು, ಭಜನಾ ತಂಡಗಳು, ಕೊರಗ ಸಮುದಾಯದ ಡೋಲು ವಾದನ, ಎತ್ತಿನಗಾಡಿ, ಯಕ್ಷಗಾನ ವೈಭವ, ಚಂಡೆ ತಂಡಗಳು ಮೆರವಣಿಗೆಯುಲ್ಲಿ ಇರಲಿದೆ.

ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು: ಏಕಕಾಲದಲ್ಲಿ ಜೆ.ಎನ್.ಆರ್. ಸಭಾಂಗಣ ಹಾಗೂ ಅವರಣ ಮತ್ತು ಕೆಸರುಗದ್ದೆಯಲ್ಲಿ ಎಲ್ಲಾ ಕಾರ್ಯಕ್ರಮಗಲೂ ಮತ್ತು ಸ್ಪರ್ಧೆಗಳ ನಡೆಯಲಿದೆ. ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ, ಕೆಸರ್ ಗದ್ದೆ ಓಟ, ಅಡಿಕೆ ಹಾಳಿಯಲ್ಲಿ ಕೂರಿಸಿ ಎಳೆಯುವುದು, ಬೀಸ್ ಬಲಿ ಬೀಸುದ್, ಚಿಟ್ ಬಿಲ್ ಶೂಟಿಂಗ್. ಅಪ್ಪ – ಮಗು ಉಪ್ಪು ಮೂಟೆ, ಚನ್ನೆಮಣೆ, ಸಾಂಪ್ರದಾಯಿಕ ಗೀತಗಾಯನ, ಕಾಯಿಜೂಜು, ಮೊಸ್ ಕುಡ್ಮಿ ಒಡೆಯುವುದು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ಹಗ್ಗಜಗ್ಗಾಟ, ಥೋಬಾಲ್, ಕೆಸರ್ ಗದ್ದೆ ಓಟ, ಅಡಿಕೆ ಹಾಳಿಯಲ್ಲಿ ಕೂರಿಸಿ ಎಳೆಯುವುದು, ಮಡ್ಸ್ ನೇಯುವುದು, ಗುಡ್ಡ ಆಟ, ಚನ್ನೆಮಣೆ ಆಟ, ಅಮ್ಮ – ಮಗು ಉಪ್ಪು ಮೂಟೆ. ಜಿಬ್ಲಿ/ಕುಂಟೆಬಿಲ್ಲೆ, ಹಿಡಿ ಕಡ್ಡಿ ಒಯ್ಯುದ್, ಕೊಟ್ಟೆ ಸೆಟ್ಟುದ್, ಹೂಮಾಲೆ ಕಟ್ಟುವುದು, ಸಾಂಪ್ರದಾಯಿಕ ಗೀತಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಚಿತ್ರಕಲೆ, ಅಜ್ಜಿ ಕಾಲದ ಕಥೆ ಹೇಳುವ ಸ್ಪರ್ಧೆ, ಸೈಕಲ್ ಟಯರ್ ಓಡುವ ಸ್ಪರ್ಧೆ. ಕೆಸರ್ ಗದ್ದೆ ಓಟ, ಬೆನ್ ಚೆಂಡ್ ಆಟ. ಲಿಂಬೆ ಚಮಚ ಓಟ, ಅಡಿಕೆ ಹಾಳಿಯಲ್ಲಿ ಕೂರಿಸಿ ಎಳೆಯುವುದು, ಗೂಟಕ್ಕೆ ಸುತ್ತಿ ಓಡುವುದು ಸ್ಪರ್ಧೆಗಳ ನಡೆಯಲಿದೆ. ನಿಶೋಧ, ತೆಂಗಿನ ಬ್ಯಾಂಗಿಯಿಂದ ಮಾದರಿ ತಯಾರಿ, ರಸಪ್ರಶ್ನೆ ಸ್ಪರ್ಧೆ. ಚಿಟ್ ಬಿಲ್ ಸ್ಪರ್ಧೆ ಮುಕ್ತ ವಿಭಾಗದಲ್ಲಿ ನಡೆಯಲಿದೆ. ಸಾರ್ವಜನಿಕರು ಎಲ್ಲಾ ಸ್ಪರ್ಧೆಗಳಲ್ಲಿ ಉಚಿತವಾಗಿ ನೊಂದಣಿಯೊಂದಿಗೆ ಭಾಗವಹಿಸಬಹುದಾಗಿದೆ.

ವಿಶೇಷತೆ:  ಬೆಳಿಗ್ಗೆಯಿಂದ 40 ಜೊತೆ ಕಂಬಳ ಕೋಣಗಳ ಆಕರ್ಷಕ ಓಟ ಇರಲಿದೆ. ನೆಲಮೂಲದ ಬಳಕೆಯ ಹತಾರುಗಳ ಪ್ರದರ್ಶನ, ಮಡಿಕೆ – ಅಕ್ಕಿಮುಡಿ – ಹಾಳಿ ಟೊಪ್ಪಿ – ಬೀಳ್ ಬುಟ್ಟಿ ತಯಾರಿ ಪ್ರಾತ್ಯಕ್ಷಿಕೆಗಳು, ಕೊರಗ ಸಮುದಾಯದ ಕಲಾ ಪ್ರದರ್ಶನ, ಹಾಡು – ಹಸೆ, ಪಿಟ್ಲಂಡಿ ಹೊಡುದ್, ಕುಂದಾಪ್ರ ಕನ್ನಡದ ಹರಟೆ, ಕುಂದಾಪ್ರ ಶೈಲಿಯಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ, ಸಂಜೆ ಪಾನಕ ವ್ಯವಸ್ಥೆ, ಶವರ್ ಡಾನ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಹಬ್ಬದ ವಾತಾವರಣ ಇರಲಿದೆ.

ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳ ಆಗಮನ: ಉದ್ಘಾಟನಾ ಕಾರ್ಯಕ್ರಮದಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ. ಸಂಸದರುಗಳಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಲಿ, ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ಕೆ. ಜಯಪ್ರಕಾಶ್ ಹೆಗ್ಡೆ, ಉದ್ಯಮಿಗಳಾದ ಹೆಚ್. ಜಯಶೀಲ ಶೆಟ್ಟಿ. ರಾಜೇಶ್ ಕಾರಂತ್, ಸುಗ್ಗಿ ಸುಧಾಕರ ಶೆಟ್ಟಿ, ಗೋವಿಂದ ಬಾಬು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ನಟ ಶೈನ್ ಶೆಟ್ಟಿ. ಎಸ್. ರಾಜು ಪೂಜಾರಿ, ಗೋಕುಲ್ ಶೆಟ್ಟಿ. ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ, ಜನಾರ್ದನ ದೇವಾಡಿಗ, ಬಾರ್ಕೂರು ದೀಪಕ್ ಶೆಟ್ಟಿ ಸೇರಿದಂತೆ ಹಲವು ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.

ಮಕ್ಕಳ ಸ್ಪರ್ಧೆಗಳಿಗೆ ಬೆಳಿಗ್ಗೆ ಸ್ಥಳದಲ್ಲಿಯೇ ನೊಂದಣಿ ಇರಲಿದೆ. ಬೆಳಿಗ್ಗೆಯಿಂದಲೇ ಎಲ್ಲಾ ಸ್ಪರ್ಧೆಗಳು ಆರಂಭವಾಗುವುದರಿಂದ ಸ್ಪಧಿ೯ಗಳು ಆರಂಭದಲ್ಲಿಯೇ ಹಾಜರಿರಬೇಕು. ಎಲ್ಲಾ ವಿಭಾಗದ ವಿಜೇತರಿಗೆ ಪದಕ, ಸರ್ಟಿಫಿಕೇಟ್ ನೀಡಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ನೆಲ್ಯಾಡಿ ಬೈಲ್  ಜಾಗದ ಮಾಲಕರಾದ ದಿವಾಕರ್ ಶೆಟ್ಟಿ ನೆಲ್ಯಾಡಿ, ಪ್ರಿಯದರ್ಶಿನಿ ಬೆಸ್ಕೂರು ಉಪಸ್ಥಿತರಿದ್ದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿದರು.ಕುಂದಾಪ್ರ ಡಾಟ್ ಕಾಮ್ ಸಂಪಾದಕ ಸುನಿಲ್ ಎಚ್. ಜಿ.ಬೈಂದೂರು ವಂದಿಸಿದರು.

ವರದಿ/ಗಿರಿ ಶಿರೂರು

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *

eighteen + eight =