ಬೈಂದೂರು: ಕಳೆದ 79 ದಿನಗಳಿಂದ ಬೈಂದೂರಿನಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಅರ್ನಿದಿಷ್ಟಾವಧಿ ಧರಣಿ ನಡೆಯುತ್ತಿದೆ.ಈಗಾಗಲೇ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿದೆ.ಸರಕಾರದಿಂದ ನಿರ್ದೇಶನ ಬಾಕಿ ಇದೆ.ಇದರ ನಡುವೆ ಬೈಂದೂರು ಪಟ್ಟಣ ಪಂಚಾಯತ್ ಅಧಿಕಾರಿಗಳು ತಗ್ಗರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡ್ಕುಳಿ ಬಳಿ ಆರು ಎಕರೆ ಜಾಗದಲ್ಲಿ ಸುಮಾರು 4.20 ಕೋಟಿ ರೂಪಾಯಿ ಅನುದಾನದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಆರಂಭಿಸಲು ಮುಂದಾಗಿದ್ದು ರೈತರು ಈ ಕಾಮಗಾರಿ ನಿರ್ಮಾಣಕ್ಕೆ ಅಸಾಮಾಧಾನ ವ್ಯಕ್ತಪಡಿಸಿ ತಡೆ ನೀಡಿದ್ದಾರೆ.
ಸರಕಾರದಿಂದ ಸ್ಪಷ್ಟತೆ ದೊರೆತ ಬಳಿಕ ಕಾಮಗಾರಿ ಆರಂಭಿಸಿ: ಬೈಂದೂರು ಪಟ್ಟಣ ಪಂಚಾಯತ್ ಗ್ರಾಮೀಣ ಭಾಗಗಳನ್ನು ಬೇರ್ಪಡಿಸುವಂತೆ ಪ್ರಕರಣ ನ್ಯಾಯಾಲಯದಲ್ಲಿದೆ.ಮಾತ್ರವಲ್ಲದೆ ಸಾವಿರಾರು ರೈತರು ಹೋರಾಟ ನಡೆಸುತ್ತಿದ್ದಾರೆ.ಇದರಿಂದಾಗಿ ಚುನಾವಣಾ ಆಯೋಗ ಬೈಂದೂರು ಪಟ್ಟಣ ಪಂಚಾಯತ್ ಚುನಾವಣೆಯನ್ನು ಕೂಡ ಮುಂದೂಡಿದೆ.ಮಾತ್ರವಲ್ಲದೆ ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗದ ಜನರಿಗೆ ಆಗುತ್ತಿರುವ ಸಮಸ್ಯೆ ಅರಿತು 15 ವಾರ್ಡ್‌ಗಳಿಗೆ ಪಟ್ಟಣ ಪಂಚಾಯತ್ ಸೀಮಿತಗೊಳಿಸಿ 5 ವಾರ್ಡ್‌ಗಳನ್ನು ಕೈಬಿಡುವಂತೆ ಸರಕಾರಕ್ಕೆ ಪ್ರಸ್ತಾವನೆ ಕೂಡ ಕಳುಹಿಸಿದ್ದಾರೆ.ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯವಾದ ಬಳಿಕ ಕಾಮಗಾರಿ ಆರಂಭವಾದರೆ ಹಣಕಾಸು ಇಲಾಖೆ ವರದಿಗೆ ಸಮಸ್ಯೆಯಾಗುತ್ತದೆ ಮತ್ತು ಚುನಾಯಿತ ಪ್ರತಿನಿಧಿಗಳಿಲ್ಲದೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಏಕಾಎಕಿ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ. ಹೀಗಾಗಿ ಮೊದಲು ನಮ್ಮ ಹೋರಾಟಕ್ಕೆ ನ್ಯಾಯ ದೊರಕಿದ ಬಳಿಕ ಕಾಮಗಾರಿ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಈಗಾಗಲೇ ಗ್ರಾಮೀಣ ಭಾಗದ ಜನರ ಬೇಡಿಕೆಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.ಅದರ ಪ್ರಕ್ರಿಯೆ ನಡೆಯುತ್ತಿದೆ.ಇದರ ನಡುವೆ ಯಾವುದೇ ಮಾಹಿತಿ ನೀಡದೆ ಕಾಮಗಾರಿ ಆರಂಭಿಸಲು ಮುಂದಾದ ಪಟ್ಟಣ ಪಂಚಾಯತ್ ಅಧಿಕಾರಿಗಳ ನಡೆ ನಮ್ಮ ಹೋರಾಟ ಹತ್ತಿಕ್ಕುವ ಕೆಲಸವಾಗಿದೆ.ಹೀಗಾಗಿ ರೈತರಿಗೆ ನ್ಯಾಯ ಸಿಗುವವರೆಗೆ ಮತ್ತು ಸರಕಾರ ಸ್ಪಷ್ಟ ನಿರ್ದೇಶನ ನೀಡುವ ವರೆಗೆ ಬೈಂದೂರು ಪಟ್ಟಣ ಪಂಚಾಯತ್ ಸರಕಾರದ ಅನುದಾನದಿಂದ ಕಾಮಗಾರಿ ಆರಂಭಿಸಲು ರೈತ ಸಂಘ ಒಪ್ಪುವುದಿಲ್ಲ. ಒಂದೊಮ್ಮೆ ಒತ್ತಾಯ ಪೂರ್ವಕವಾಗಿ ಕಾಮಗಾರಿ ನಡೆಸಲು ಮುಂದಾದರೆ ಸಾವಿರಾರು ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಾಮಗಾರಿ ನಡೆಯುವ ಸ್ಥಳದಲ್ಲಿ ಜಮಾಯಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ವಿವಿಧ ಸಂಘಟನೆಯ ಮುಖಂಡರು ಹಾಜರಿದ್ದರು.
ವರದಿ/ಗಿರಿ ಶಿರೂರು