ಶಿರಾಲಿ: ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಶಿರಾಲಿಯ 2002-2004ನೇ ಸಾಲಿನ ಹಳೆ ವಿದ್ಯಾರ್ಥಿಗಳು 25 ವರ್ಷಗಳ ನಂತರ ದಿನಾಂಕ 22-02-2026ರಂದು “ಪುನರ್ಮಿಲನ – ಸ್ಮೃತಿ, ಸಂಗಮ, ಗುರುವಂದನಾ” ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದರು.ಕಾಲೇಜಿನ ಆವರಣದಲ್ಲಿ “Back to College” ಎಂಬ ಆಕರ್ಷಕ ಸೆಲ್ಫಿ ಕಾರ್ನರ್ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಳೆಯ ದಿನಗಳ ನೆನಪನ್ನು ಮತ್ತೆ ಜೀವಂತಗೊಳಿಸಿತು. ಚಂಡೆಯ ಮೂಲಕ ಗುರುಗಳಿಗೆ ಹೂಮಳೆ ಮೂಲಕ ಸ್ವಾಗತಿಸಲಾಯಿತು.ಮನಮೋಹಕವಾಗಿತ್ತು, ವನಮಹೋತ್ಸವ, ಬೆರಳಚ್ಚಿನ ಮರವನ್ನು ತಯಾರಿಸಿ, ಹಳೆಯ ಮಧುರ ನೆನಪುಗಳನ್ನು ಮೆಲಕು ಹಾಕುತ್ತ ಒಂದು ತರಗತಿಯನ್ನು ನಡೆಸಿ , 25 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದ್ದ ಸಹಪಾಠಿಗಳು ಸಂತೋಷದ ಆತ್ಮೀಯತೆಯ ಕ್ಷಣಗಳನ್ನು ಹಂಚಿಕೊಂಡರು.ತಮ್ಮ ಜೀವನದಲ್ಲಿ ದಾರಿ ತೋರಿದ ಗುರುಗಳನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸುವ ಮೂಲಕ ಹಳೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಗುರುಗಳು, “ವಿದ್ಯಾರ್ಥಿಗಳ ಯಶಸ್ಸೇ ನಮಗೆ ದೊರೆಯುವ ಅತ್ಯಂತ ದೊಡ್ಡ ಬಹುಮಾನ” ಎಂದು ಹೇಳಿ ಹರ್ಷ ವ್ಯಕ್ತಪಡಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ಹಳೆ ವಿದ್ಯಾರ್ಥಿಗಳು ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಲ್ಲಿ ಯಾವುದೇ ಕಾಲೇಜು ಆಗಲಿ ಮುಚ್ಚುವ ಪರಿಸ್ಥಿತಿಗೆ ಬಂದು ನಿಲ್ಲುವುದಿಲ್ಲ ಎಂದರು.

ಹಳೆ ವಿದ್ಯಾರ್ಥಿಗಳು ಒಟ್ಟುಗೂಡಿಸಿದ ಮೊತ್ತದಲ್ಲಿ ಕಾಲೇಜಿಗೆ 1 ಲಕ್ಷ ರೂಪಾಯಿ ಮೌಲ್ಯದ ಚೆಕ್ ನೀಡುವ ಕೆಲಸ ಕೂಡ ನಡೆಯಿತು. ಹಾಗೆಯೇ ಪ್ರತಿವರ್ಷ ಬಡತನ ರೇಖೆಗಿಂತ ಕೆಳಗಿರುವ ಕೆಲವು ಬಡ ವಿದ್ಯಾರ್ಥಿಗಳಿಗೆ ದತ್ತು ತೆಗೆದುಕೊಳ್ಳುವ ನಿರ್ಧಾರ ಕೂಡ ಮಾಡಲಾಯಿತು. ನಮ್ಮ ನಿರ್ಧಾರಕ್ಕೆ ಮೆಚ್ಚಿ ನಮ್ಮ 2002-04 ರ ಸಮಯದಲ್ಲಿನ ಪ್ರಾಂಶುಪಾಲರಾದ ಅಮೃತ ಬಿ ರಾಮರಥ ಸರ್ ಅವರು ತಾನೂ ಕೂಡ ಪ್ರತಿ ವರ್ಷ ಒಬ್ಬ ಬಡ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎನ್ನುವ ನಿರ್ಧಾರ ಕೈಗೊಂಡರು.ಸಾಂಸ್ಕೃತಿಕ ಕಾರ್ಯಕ್ರಮಗಳು, ಅನುಭವ ಹಂಚಿಕೆ, ಸ್ಮರಣಿಕೆ ವಿತರಣೆ ಹಾಗೂ ಸಮೂಹ ಭೋಜನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. “ಸ್ಮೃತಿ – ಸಂಗಮ – ಗುರುವಂದನಾ” ಎಂಬ ಶೀರ್ಷಿಕೆಯಂತೆ ಈ ಪುನರ್ಮಿಲನವು ಹಳೆಯ ನೆನಪುಗಳನ್ನು ಮರುಕಳಿಸಿ ಸ್ನೇಹದ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು.

Leave a Reply

Your email address will not be published. Required fields are marked *

nine + seventeen =