ಬೈಂದೂರು: ಉದ್ಯೋಗದಲ್ಲಿ ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕತೆ ಅತೀ ಮುಖ್ಯವಾದ ಅಂಗಗಳು. ಜೊತೆಗೆ ಶಿಸ್ತು ಪಾಲನೆ ಹಾಗೂ ಸಮಯ ಪ್ರಜ್ಞೆಯನ್ನೂ ಅಳವಡಿಸಿಕೊಂಡಾಗ ಯಶಸ್ವಿ ಉದ್ಯಮಿಯಾಗಿ ಇತರರಿಗೂ ಮಾದರಿಯಾಗಿ ಬೆಳೆಯಬಹುದು.ಜೀವನೋಪಾಯಕ್ಕಾಗಿ ಮಾಡುವ ನಮ್ಮ ಉದ್ಯೋಗವನ್ನು ಮೊದಲು ನಾವು ಗೌರವಿಸಬೇಕು.ಆಗ ನಮ್ಮನ್ನು ಸಮಾಜ ಗೌರವಿಸುತ್ತದೆ ಎಂದು ಹಿರಿಯ ರಂಗ ಕಲಾವಿದ, ನಿರ್ದೇಶಕ ಕಂಚಿಕಾನ್ ರವೀಂದ್ರ ಕಿಣಿ ಹೇಳಿದರು ಅವರು ಉಪ್ಪುಂದ ಮಾತೃಶ್ರೀ  ಸಭಾಭವನದಲ್ಲಿ ನಡೆದ ಬೈಂದೂರು ವಲಯದ ಧ್ವನಿ-ಬೆಳಕು ಸಂಯೋಜಕರ ಸಂಘಟನೆಯ 14ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಡಿದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಂಘಟನೆಯ ತಾಕತ್ತು ಬಲಗೊಳ್ಳುತ್ತದೆ. ಈ ಸಂಘಟನೆಯಲ್ಲಿ ಉದ್ಯಮದ ಮಾಲೀಕನೇ ನೌಕರನಾಗಿ ದುಡಿಯುತ್ತಿರುತ್ತಾನೆ. ಧ್ವನಿ ಮತ್ತು ಬೆಳಕು ಇಲ್ಲವಾದರೆ ಯಾವುದೇ ಸಮಾರಂಭಗಳು ಕಾರ್ಯಗಳು ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಸಂಘದ ಸದಸ್ಯರೆಲ್ಲರೂ ಪರಸ್ಪರ ಪೈಪೋಟಿಗಿಳಿಯದೇ ಧನಾತ್ಮಕ ಚಿಂತನೆಗಳ ಮೂಲಕ ಸೌಹಾರ್ದಯುತವಾಗಿ ಸಮಾಜಕ್ಕೂ ನ್ಯಾಯ ಸಿಗುವ ರೀತಿಯಲ್ಲಿ ವ್ಯವಹಾರ ಮಾಡುವಂತಾಗಬೇಕು ಎಂದರು.

ಬೈಂದೂರು ವಲಯದ ಅಧ್ಯಕ್ಷ ಗಣೇಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಧ್ವ.ಬೆ.ಸಂ.ಸಂ ಜಿಲ್ಲಾಧ್ಯಕ್ಷ ಧರ್ಮರಾಜ್ ಕುಂದರ್, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕುಂದಾಪುರ, ಕೋಶಾಧಿಕಾರಿ ಗಣೇಶ್ ಎಂ. ಕೆ., ರಾಜ್ಯ ಪ್ರತಿನಿಧಿ ರಾಘವೇಂದ್ರ ಪ್ರಭು ಕೋಟ, ಕುಂದಾಪುರ ವಲಯಾಧ್ಯಕ್ಷ ಸತೀಶ್ ಮುಳ್ಳುಗುಡ್ಡೆ, ಬ್ರಹ್ಮಾವರ ವಲಯಾಧ್ಯಕ್ಷ ಚಂದ್ರಶೇಖರ ಪೂಜಾರಿ, ಉಡುಪಿ ವಲಯಾಧ್ಯಕ್ಷ ಸಂತೋಷ ಶೆಟ್ಟಿಗಾರ್, ಕಾಪು ವಲಯಾಧ್ಯಕ್ಷ ಸುಧಾಕರ ಸುವರ್ಣ, ಕಾರ್ಕಳ ವಲಯಾಧ್ಯಕ್ಷ ನವೀನ್ ಲೋಬೋ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಬೈಂದೂರು ವಲಯ ಗೌರವಾಧ್ಯಕ್ಷ ಶಶಿಧರ ಶೆಣೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಪ್ರಭಾಕರ ದೇವಾಡಿಗ ವರದಿ ವಾಚಿಸಿದರು. ನಿಕಟಪೂರ್ವ ಕಾರ್ಯದರ್ಶಿ ಯು.ವಿನಾಯಕ ಪ್ರಭು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.ರಾಜ್ಯ ಪ್ರತಿನಿಧಿ ಎಚ್. ಉದಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಶೇಷು ದೇವಾಡಿಗ ವಂದಿಸಿದರು.

 

Leave a Reply

Your email address will not be published. Required fields are marked *

seventeen − 13 =

You missed