ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಕಡೆ ಕಾಂಗ್ರೇಸ್ ಪಕ್ಷ ಭರ್ಜರಿ ಪ್ರಚಾರ ಕೈಗೊಂಡಿದೆ.ಈ ಬಾರಿ ಹೊಸ ಮಾದರಿಯ ಪ್ರಚಾರ ಕೈಗೊಂಡಿದ್ದು ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರು ಪ್ರತ್ಯೇಕ ತಂಡ ರಚಿಸಿ ಮತದಾರರ ಮನೆ ಮನೆ ಬೇಟಿ ನಡೆಸುತ್ತಿದ್ದಾರೆ.ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಬೈಂದೂರು ಕ್ಷೇತ್ರದ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ನಾನು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ.ನನ್ನ ಅವಧಿಯಲ್ಲಿ ಬೈಂದೂರು ತಾಲೂಕು ರಚನೆ ಸೇರಿದಂತೆ ಕೃಷಿಕರು,ಮೀನುಗಾರರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ನೂರಾರು ಯೋಜನೆಗಳು ಅನುಷ್ಠಾನಗೊಂಡದೆ.ಜನರಿಗೆ ನನ್ನ ವ್ಯಕ್ತಿತ್ವ ಚೆನ್ನಾಗಿ ತಿಳಿದಿದೆ.ಬಿಜೆಪಿ ಕಳೆದ ಚುನಾವಣೆಯಲ್ಲಿ ಪರೇಶ್ ಮೇಸ್ತ ಸಾವಿನ ಕುರಿತು ಸುಳ್ಳು ಸುದ್ದಿ ಮೂಲಕ ಗೆಲುವು ಸಾಧಿಸಿದೆ.ಕಳೆದ ಐದು ವರ್ಷದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗೆಟ್ಟು ಹೋಗಿದ್ದಾರೆ.ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮೂರು ಪಟ್ಟು ಹೆಚ್ಚಿದೆ.ಬಿಜೆಪಿ ಸುಳ್ಳು ಪ್ರಚಾರ ಹಾಗೂ ಪ್ರಚಾರದ ವೈಭವೀಕರಣ ಮೂಲಕ ಕನಸಿನ ಪ್ರಪಂಚ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ.ಆದರೆ ಈ ಬಾರಿ ಮತದಾರರು ಯಾವುದು ವಾಸ್ತವ ಅದನ್ನು ಮಾತ್ರ ಗಮನಿಸುತ್ತಾರೆ.ಈ ಕ್ಷೇತ್ರಕ್ಕೆ ಬೇಕಾಗಿರುವ ಅಭಿವೃದ್ದಿ ಹಾಗೂ ಸಾಧನೆಯನ್ನು ಬಿಂಬಿಸಿ ಮತಯಾಚಿಸುತ್ತಿದ್ದೇವೆ.ಆದುದರಿಂದ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದರು.
ನೂರಾರು ಕಾರ್ಯಕರ್ತರ ಸೇರ್ಪಡೆ: ಬೈಂದೂರು ಕ್ಷೇತ್ರದ ವಿವಿಧ ಕಡೆ ನೂರಾರು ಕಾರ್ಯಕರ್ತರು ಬಿಜೆಪಿಯಿಂದ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.ಬೈಂದೂರು ಸೇರಿದಂತೆ ವಿವಿಧ ಬೂತ್‌ಗಳಲ್ಲಿ ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.