ಬೈಂದೂರು: ವತ್ತಿನೆಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ(ಕಿರು ಮಂತ್ರಾಲಯ)ದಲ್ಲಿ ಆ.30ರಂದು ಶ್ರೀ ಗುರುರಾಯರ 355ನೇ ಆರಾಧನಾ ಮಹೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. 29ರಂದು ಮೊದಲ್ಗೊಂಡು 31ರವರೆಗೆ ರಾಯರ ಸನ್ನಿಧಿಯಲ್ಲಿ ಸತತ ಮೂರು ದಿನ ಪಾದಪೂಜೆ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 29ರಂದು ಬೆಳಗ್ಗೆ ಕವಾಟೋದ್ಘಾಟನೆ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಕಲಶ ಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಮಹಾ ಪ್ರಾರ್ಥನೆ, ಶಂಖತೀರ್ಥ ಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ ನಡೆಯಲಿದೆ. 30ರಂದು ಬೆಳಗ್ಗೆ 9 ರಿಂದ ಸಂಜೆ 6ರ ತನಕ ಪಾದಪೂಜೆ, ಮಹಾ ಪ್ರಸಾದ ಹಾಗೂ ಆಂಜನೇಯ ಸ್ವಾಮಿಗೆ ಬೆಣ್ಣೆ ಸೇವೆ, ಶ್ರೀ ನವಗ್ರಹರಿಗೆ ಪ್ರಸನ್ನ ಪೂಜೆ, ಶ್ರೀ ನಾಗ ದೇವರಿಗೆ ಕ್ಷೀರಾಭಿಷೇಕ, ಸಂಜೆ ಶ್ರೀಗುರುರಾಯರಿಗೆ ಚಾಮರ ಸೇವೆ, ರಾತ್ರಿ ಪೂಜೆ, ಅಷ್ಟಾವಧಾನ ಸೇವೆ, ತೀರ್ಥ ಪ್ರಸಾದ, ಮಹಾಮಂತ್ರಾಕ್ಷತೆ ಹಾಗೂ 31ರಂದು ಉತ್ತರಾಧನೆ ನೆರವೇರಲಿದೆ.
ಆ.30ರಂದು ಬೆಳಗ್ಗೆ ಬೈಂದೂರು ಸೇವಾ ಸಂಗಮ ಶಿಶುಮಂದಿರ ಮಾತೆಯರಿಂದ ವಿಷ್ಣು ಸಹಸ್ರನಾಮ ಪಠಣ, ಮಧ್ಯಾಹ್ನ 2ರಿಂದ ಸಂಜೆ 6ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ನಾಗೂರು ಹೇರಂಜಾಲು ಯಕ್ಷಬಳಗದಿಂದ ಯಕ್ಷಗಾನ ವೈಭವ, ರಾತ್ರಿ ಮಾಳಕೋಡ್ ಯಕ್ಷಪಲ್ಲವಿ ಟ್ರಸ್ಟ್ ಯಕ್ಷಗಾನ ಮಂಡಳಿಯಿಂದ ‘ಶಿವಭಕ್ತ ಮಾಲಿ’ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಮಠದ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.