ಬೈಂದೂರು: ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಕೆಲವೊಂದು ವಿದ್ಯಮಾನಗಳು ಜನತೆ ಮತ್ತು ಸಮಾಜ ಒಂದು ಹಂತದವರೆಗೆ ಎಲ್ಲವನ್ನು ಸಹಿಸಿಕೊಳ್ಳುತ್ತದೆ.ಅದು ಉಸಿರು ಕಟ್ಟಿಸುವ ಪರಿಸ್ಥಿತಿ ಬಂದರೆ ಸಹಜವಾಗಿ ಸಮಾಜ ತಿರುಗಿ ಬೀಳುತ್ತದೆ.ಮಾತ್ರವಲ್ಲದೆ ಸುನಾಮಿಯಾಗುತ್ತದೆ ಎನ್ನುವ ಸಂದೇಶ ನೀಡುತ್ತಿದೆ ಮತ್ತು ಎ.ಐ ಜಮಾನದ ಭವಿಷ್ಯದ ಕಳವಳತೆಯನ್ನು ಪರೋಕ್ಷವಾಗಿ ಬಿಸಿ ನೀಡುತ್ತಿದೆ.

ಒಂದು ಕಾಲದಲ್ಲಿ ತಮಿಳುನಾಡಿನಲ್ಲಿ ಎರಡು ಪಕ್ಷಗಳು ಮಾತ್ರ ಅಧಿಕಾರಕ್ಕೆ ಸೀಮಿತ.ತಲೆಮಾರುಗಳಿಂದ ಬಂದ ರಾಜಕೀಯ ನಂಟಿನ ಕುಟುಂಬಗಳಿಗೆ ಮಾತ್ರ ಕುರ್ಚಿ ಎನ್ನುವ ಕಣ್ಣಿಗಂಟಿದ ಪೊರೆಯನ್ನು ಮೊನ್ನೆ ನಡೆದ ಅಲ್ಲಿನ ವಿಧಾನಸಭೆ ಚುನಾವಣೆ ಕಳಚಿಬಿಟ್ಟಿದೆ. ಚಿತ್ರನಟ ವಿಜಯ್ ಅಷ್ಟೇನೂ ರಾಜಕೀಯ ಅನುಭವಗಳಿಲ್ಲ. ಹತ್ತಾರು ವರ್ಷಗಳ ರಾಜಕೀಯ ನಡೆಸಿದ ಘಟಾನುಘಟಿ ಪಕ್ಷಗಳೆದರು ಕೆಲವು ಕಡೆ ಬೂತ್ ಎಜೆಂಟರನ್ನು ನೇಮಿಸಲು ಸಾಧ್ಯವಾಗದಿದ್ದರು ಕೂಡ ಪ್ರಚಂಡ ಬಹುಮತ ಗಳಿಸಿ ತಮಿಳುನಾಡು ಸರಕಾರದ ಆಡಳಿತ ಚುಕ್ಕಾಣಿ ಹಿಡಿದಿದೆ.ಅದರರ್ಥ ಅಲ್ಲಿನ ಜನ ಹೊಸತನ ಬಯಸಿದ್ದಾರೆ.ಬದಲಾವಣೆ ಅಪೇಕ್ಷಿಸಿದ್ದಾರೆ.ಯುವಜನತೆಯ  ಮೈಂಡ್ ಸೆಟ್ ಬದಲಾಗಿದೆ.

ಈ ನಿದರ್ಶನ ಒಂದೆಡೆಯಾದರೆ ಇನ್ನೊಂದೆಡೆ ದೆಹಲಿಯ ಜಂಥರ್ – ಮಂಥರ್ ಮತ್ತು ಕಾಕ್ರೋಚ್ ಪಾರ್ಟಿ .ಎರಡು ರಾಷ್ಟ್ರೀಕೃತ ಬಲಿಷ್ಟ ಪಕ್ಷಗಳು ಹಲವು ವರ್ಷದ ಗಟ್ಟಿ ಇತಿಹಾಸ ಹೊಂದಿದೆ.ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹೇಳಿಕೆಯೊಂದನ್ನೆ ಸ್ವಾಭಿಮಾನವಾಗಿ ಸ್ವೀಕರಿಸಿದ ಯುವಕರು ದೇಶವ್ಯಾಪಿ ಯುವಕ್ರಾಂತಿ ನಡೆಸಿದರು.ದೆಹಲಿಯ ಜಂಥರ್ -ಮಂಥರ್ ಇತಿಹಾಸ ನಿರ್ಮಿಸಿದರು. ಯಾವ ಆಂಗಲ್‌ನಲ್ಲಿ ಅಳೆದು ತೂಗಿದರು ಮುಂದಿನ ಐದತ್ತು ವರ್ಷ ಶೇಖ್ ಮಾಡಲಾಗದ ಕೇಂದ್ರ ಸರಕಾರದ ಬುಡವನ್ನು ಅಲ್ಲಾಡಿಸಿದರು. ಒಂದು ದೇಶದ ಮಟ್ಟದಲ್ಲಿ ಈ ಆಕ್ರೋಶ ನಿಯಂತ್ರಿಸಲು ಪ್ರತ್ಯಕ್ಷ,  ಪರೋಕ್ಷ ಹರಸಹಸ ಮಾಡಿದರು ಕೂಡ ವಿದ್ಯಾರ್ಥಿ ಸಮೂಹದ ಆಕ್ರೋಶ ಹಿಮ್ಮೆಟ್ಟಿಸಲಾಗದೆ ಆಡಳಿತ ಮಂಡಿಯೂರಿದೆ. ಕೇಂದ್ರ ಸರಕಾರ ಕೊನೆಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಿತು.

ಈ ಎರಡು ಉದಾಹರಣೆಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಅದರ ಗಂಭೀರತೆಯನ್ನು ಮನನ ಮಾಡಿಸುತ್ತದೆ. ಮತ್ತು ನಾನೆ ಎಂದು ಅಹಂಕಾರದಲ್ಲಿ ಅಧಿಕಾರದಲ್ಲಿ ಮೆರೆಯುವವರಿಗೆ ಬದಲಾವಣೆಗಳ ಯಾವ ಆಂಗಲ್‌ನಲ್ಲಾದರು ಒದ್ದು ಬೀಳಿಸುತ್ತದೆ ಮತ್ತು ಜನ ಎಲ್ಲವನ್ನು ಅರ್ಥಮಾಡಿ ಸೂಕ್ಷ್ಮವಾಗಿ ಗಮನಿಸುತ್ತಾರೆ ಎನ್ನುವುದನ್ನು ತಿಳಿಸುತ್ತದೆ.

ಬಹುಶಃ ಈ ಉದಾಹರಣೆಗಳು ಉಡುಪಿ ಜಿಲ್ಲೆಗೂ ದೂರವಿಲ್ಲ.ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ರೈತರ ಆಕ್ರೋಶ ಒಮ್ಮೆ ಅವಲೋಕಿಸಬೇಕಿದೆ ಮತ್ತು ಜನರ ಬಗ್ಗೆ ಜಿಲ್ಲಾಡಳಿತ,ಸರಕಾರ,ಜನಪ್ರತಿನಿಧಿಗಳು ಗಮನಹರಿಸದಿದ್ದರೆ ಯೋಗ್ಯ ಶಿಕ್ಷಣ ಮತ್ತು ಮಾರ್ಗದರ್ಶನ ಪಡೆದು ನಾಯಕರ ಕಾಲರ್ ಪಟ್ಟಿ ಹಿಡಿದು ಕೇಳುತ್ತಾರೆ ಎನ್ನುವುದು ಸಾಬೀತಾಗಿದೆ.

ಬೈಂದೂರು ರೈತ ಹೋರಾಟ ಕಳೆದ ಐದು ವರ್ಷದಿಂದ ಬೂದಿ ಮುಚ್ಚಿದ ಕೆಂಡದಂತಿದೆ.ಮೊನ್ನೆ ನಡೆದ ಪ್ರತಿಭಟನೆ ಅಕ್ಷರಶಃ ರೈತರ ಕಿಚ್ಚು ಬುಗಿಲೆದ್ದಿದೆ.ತಾವು ಅನುಭವಿಸುವ ನೋವು ರಾಜಕಾರಣಿಗಳ ಕುಸ್ತಿ ಎಲ್ಲವೂ ಕೂಡ ಕಂಡು ಆಕ್ರೋಶದ ಕೋಪ ನೆತ್ತಿಗೇರಿಸಿಬಿಟ್ಟಿದೆ.ಸಹಜವಾಗಿ ನೀಡಬಹುವುದಾದ ನ್ಯಾಯ ಅನ್ಯಾಯವಾಗಿ ವಿಳಂಬಿಸುವ ಮೂಲಕ ನಾಟಕ ನಡೆಯುತ್ತಿದೆ ಎನ್ನುವ ನೋವು  ಪ್ರತಿಯೊಬ್ಬರದ್ದಾಗಿದೆ.ಒಂದು ಹಂತದಲ್ಲಿ ಒಂದು ವರ್ಷದಿಂದ ನಡೆಯುವ ಹೋರಾಟ ಕಾಟಾಚಾರಕ್ಕೆ ,ಜನ ಇಲ್ಲಾ ,ರೈತರು ಅದಕ್ಕೆ ಬೆಂಬಲವಿಲ್ಲಾ ಅಂತೆಲ್ಲಾ ದಿಕ್ಕುತಪ್ಪಿಸಿ ಹತ್ತಿಕ್ಕುವ ಪ್ರಯತ್ನ ನಿರಂತರ ನಡೆದರು ಸಹ ಕೇವಲ ನಾಲ್ಕೈದು ಹಳ್ಳಿಗಳಿಂದ ಅಷ್ಟೊಂದು ಜನಸಾಗರ ಹರಿದು ಬಂದಿದೆ.ಅಂದರೆ ಜನರ ಆಕ್ರೋಶ ಯಾವ ಮಟ್ಟಿಗಿದೆ ಎನ್ನುವ ಅಂಶ ಮನನ ಮಾಡಬೇಕಿದೆ. ಬೈಂದೂರಿನ ಎರಡು ರಾಜಕೀಯ ಪಕ್ಷ ಒಟ್ಟಾದರು ಅಷ್ಟೊಂದು ಜನರನ್ನು ಸೇರಿಸಲು ಸಾಧ್ಯವಿಲ್ಲ ಅನ್ನೋದು ಜನರ ಅಭಿಪ್ರಾಯ.ಹೋರಾಟದ ಹಿಂದಿನ ತಯಾರಿ ಮತ್ತು ಮಾಸ್ಟರ್ ಪ್ಲಾನ್ ಶ್ಲಾಘೀಸಲೆಬೇಕು.ಯಾವುದೇ,ಬ್ಯಾನರ್,ಪ್ರಚಾರ ಇಲ್ಲದೆ ಸೈಲೆಂಟಾಗಿ ಸಂದೇಶ ರವಾನಿಸಿರುವುದು.ರಥಬೀದಿ ಮದ್ಯದಲ್ಲಿ ಸಭೆ ನಡೆಸಿರುವುದು, ರಸ್ತೆ ತಡೆ ಮಾಡಿದಾಗ ಆರಕ್ಷಕರು ಲಾಠಿ ಬೀಸಲು ತಯಾರಿ ನಡೆಸಿದರು ಕೂಡ ಚೂರು ಅಂಜಿಕೆ ತೋರದೆ ಸಿಡ್ಡಿದೆದ್ದು ನಿಂತಿದ್ದು, ಯಾವುದೇ ರೀತಿಯಲ್ಲಿ ಮನ ಒಲಿಸಿದರು ಜಿಲ್ಲಾಧಿಕಾರಿಗಳು ಬರಲೇಬೇಕು  ಎಂದು ಪಟ್ಟು ಹಿಡಿದಿದ್ದು , ಸ್ಥಳಕ್ಕಾಗಮಿಸದ ಶಾಸಕರನ್ನು,ವಿಳಂಬವಾಗಿ ಬಂದ ಮಾಜಿ ಶಾಸಕರನ್ನು  ಪಕ್ಷಬೇದ ಮರೆತು ಖಂಡಿಸಿದ್ದು, ದೇವಪ್ಪ ಮರಾಠಿ ಎನ್ನುವ ರೈತ ನೋಡುನೋಡುತ್ತಲೆ ಕುತ್ತಿಗೆಗೆ ರೈತರ ಶಾಲು ಬಿಗಿದುಕೊಂಡು ಒಂದೈದು ನಿಮಿಷ ಅಂದರೆ  ಪ್ರಾಣವೆ ಹೋಗುವಂತೆ ಆತ್ಮಹತ್ಯಗೆ ಪ್ರಯತ್ನ ಮಾಡಿದ್ದು ,ನಿಜವಾದ ವಿಷದ ಬಾಟಲಿ ಹಿಡಿದು ಬಂದಿದ್ದು, ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಮಳೆ ಗಾಳಿ ಲೆಕ್ಕಿಸದೆ ಊಟ ಬಿಟ್ಟು ಧರಣಿಗೆ ದುಮುಕಿದ್ದು ,ಸುಮಾರು 20 ಯುವಕರ ಜೊತೆ ಕೆಲವು ಮಹಿಳೆಯರು ಕೂಡ ಜಿಲ್ಲಾಧಿಕಾರಿಗಳು ಬರುವವರೆಗೆ ಕದಲುವುದಿಲ್ಲ ಎಂದು ರಸ್ತೆಯಲ್ಲಿ ಕುಳಿತಿದ್ದು  ಇಂತಹ ಹಲವು ವಿಶೇಷಗಳು ರೈತರ ಹೋರಾಟದ ಮೌಲ್ಯ ಹೆಚ್ಚಿಸಿತ್ತು.ಒಟ್ಟಾರೆ ಅಲ್ಲಿನ ಜನರ ರೋಷ ಯಾರಿಂದಲೂ ತಡೆಯಲು ಸಾಧ್ಯವಾಗಿಲ್ಲ. ಮಾತ್ರವಲ್ಲದೆ ಧರಣಿಯ ಅಚ್ಚುಕಟ್ಟುತನ ಕೂಡ ಇತರರಿಗೆ ಮಾದರಿಯಾಗಿತ್ತು.ಅಕ್ಷರಶಃ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿತ್ತು.

ಜಿಲ್ಲೆಯ ಮತ್ತು ಕ್ಷೇತ್ರದ ಪ್ರಮುಖ ರಾಜಕೀಯ ಮುಖಂಡರು ಗೈರಾಗಿದ್ದರು ಕೂಡ ರೈತರು ಯಾರನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ.  ಬದಲಾಗಿ ಮುಂದೈತೆ ಮಾರಿ ಹಬ್ಬ ಎನ್ನುವ ಮನೋಭಾವನೆ ಈ ಸಂಘಟಿತ ಹೋರಾಟ ಬೈಂದೂರಿನ ಮುಂದಿನ ರಾಜಕಾರಣದಲ್ಲಿ ಬಹಳ ದೊಡ್ಡ ಪರಿಣಾಮ ಬೀರಲಿದೆ.ರೈತರಿಗೆ ನ್ಯಾಯ ಒದಗಿಸಿಕೊಟ್ಟರೆ ಕನಿಷ್ಟ ಜನರ ಪ್ರೀತಿಗಳಿಸಬಹುವುದಾಗಿದೆ. ಬೈಂದೂರಿನ ಈ ಹೋರಾಟ ಜಿಲ್ಲೆಯ ರಾಜಕಾರಣಿಗಳು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ.ಬೈಂದೂರಿನಲ್ಲಿ ರೈತರ ಸಮಸ್ಯೆ ಮಾತ್ರವಲ್ಲ ಜಿಲ್ಲೆಯಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಕಸ್ತೂರಿ ರಂಗನ್ ವರದಿ,ವರಾಹಿ,ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ಯಾವುದೇ ಹೊಂದಾಣಿಕೆ ಮೂಲಕ ಜನರನ್ನು ಮರಳು ಮಾಡಲು ಜನನಾಯಕರಿಂದಾಗದು ಎನ್ನುವ ಸ್ಪಷ್ಟತೆ ದೊರೆತಿದೆ.ಕೆಲವು ವಿಚಾರದಲ್ಲಿ ರಾಜಕೀಯ ಮರೆತು ಜನಸೇವೆ ಮಾಡಬೇಕಿದೆ.

ಜಿಲ್ಲೆಯಲ್ಲಿ ನಡೆಯುವ ಮರಳು ಮಾಫಿಯ, ಒಳ ಹೊಂದಾಣಿಕೆ ಇವೆಲ್ಲಾ ಇದ್ದರು ಕೂಡ ಜನನಾಯಕರಾದವರು ಮೊದಲು ಜನರ ಸಂಕಷ್ಟಗಳಿಗೆ ಸರಕಾರದ ಮಟ್ಟದಲ್ಲಿ ಸ್ಪಂಧಿಸಿ ನ್ಯಾಯ ಒದಗಿಸಬೇಕಾಗಿದೆ.ಇಲ್ಲವಾದರೆ ಬೈಂದೂರಿನಂತೆ ಇತರ ಕಡೆ ಕೂಡ ಜನಾಕ್ರೋಶ ವ್ಯಕ್ತವಾಗುತ್ತದೆ.ಬೈಂದೂರಿನ ಈ ಪ್ರತಿಭಟನೆ ಜಿಲ್ಲೆಯ ರಾಜಕೀಯ ವಲಯ ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲವಾಗಿದೆ.

ವರದಿ/ವೆಬ್ಬೇಶ್ ಬೈಂದೂರು

 

Leave a Reply

Your email address will not be published. Required fields are marked *

three × 5 =