ಬೈಂದೂರು: ಜಾತಿ ವ್ಯವಸ್ಥೆಯ ಬಂಧನದಿಂದಾಗಿ ಹಿಂದೂ ಧರ್ಮ ಹಿಂದೆ ಬಿದ್ದಿದೆ.ಅನೇಕ ಮಹಾತ್ಮರು ಶಸ್ತ್ರ ಮತ್ತು ಶಾಸ್ತ್ರದ ಮೂಲಕ ಹಿಂದೂ ಧರ್ಮದ ಉಳಿವಿಗೆ ಕಾರಣರಾಗಿದ್ದಾರೆ. ನಾವು ನಮ್ಮಲ್ಲಿನ ಜಾತಿಯನ್ನು ಕಿತ್ತೊಗೆದು ಒಟ್ಟಾಗಿ, ರಾಜಕೀಯ ಷಡ್ಯಂತ್ರವನ್ನು ಬದಿಗೊತ್ತಿ ಸಂಘಟಿತರಾಗಿ ಹಿಂದೂ ಧರ್ಮವನ್ನು ಜಗದಗಲ ಪರಿಚಯಿಸಬೇಕಾಗಿದೆ ಎಂದು ಯಳಜಿತ್ ರಾಮಕೃಷ್ಣ ಕುಟೀರದ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಮಾನೋತ್ಸವ ಪ್ರಯುಕ್ತ ಹಿಂದೂ ಸಂಗಮ ಆಯೋಜನಾ ಸಮಿತಿ ಬೈಂದೂರು ಮಂಡಲ ವತಿಯಿಂದ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ಹಿಂದೂ ಸಂಗಮ ಉದ್ಘಾಟಿಸಿ ಮಾತನಾಡಿ ಭಾರತ ದೇಶದಲ್ಲಿ ಹಿಂದೂ ಸಮಾಜ ಅಸಹಾಯಕವಾಗಬಾರದು, ದುರ್ಬಲವಾಗಬಾರದು. ಹಿಂದು ಸಮಾಜ ಜಾಗೃತವಾಗಬೇಕು. ನಮ್ಮ ಗುರು-ಹಿರಿಯರಿಂದ ಪರಂಪರಾನುಗತವಾಗಿ ಬಂದಿರುವ ಸಂಸ್ಕಾರವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಆದರ್ಶ್ ಕೇಲಾ ಬೌದ್ಧಿಕ್ ನೆಲೆಯಲ್ಲಿ ಮಾತನಾಡಿ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಜಗತ್ತಿಗೆ ಪಾಠ ಮಾಡಿದ ಅತ್ಯಂತ ಶ್ರೇಷ್ಠ ನೆಲ ನಮ್ಮ ಭಾರತ. ಪಾಲಕರು ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಕೆಲಸ ಮಾಡಬೇಕು ಆ ಮೂಲಕ ಜಾಗೃತ ಹಿಂದೂ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಅಧ್ಯಕ್ಷತೆ ವಹಿಸಿದ್ದರು. ಸತ್ಯಸ್ವರೂಪಾನಂದ ಸ್ವಾಮೀಜಿಯವರನ್ನು ಗೌರವಿಸಲಾಯಿತು ಹಾಗೂ ಮಹಾಕಾಳಿ ದೇವಸ್ಥಾನದ ನಿರ್ವಾಹಕಿ ಚಿತ್ರಾ ಬಂಕೇಶ್ವರ ಹಾಜರಿದ್ದರು.

ಈ ಸಂದರ್ಭದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಸಾಮೂಹಿಕ ಪುಷ್ಪಾರ್ಚನೆ ಸಲ್ಲಿಸಲಾಯಿತು ಹಾಗೂ ಹಿರಿಯ ಸ್ವಯಂ ಸೇವಕ ವಿಠಲ ದೇವಾಡಿಗ, ಆಶಾ ಕಾರ್ಯಕರ್ತೆ ಹಿರಿಯಕ್ಕ ಹಾಗೂ ಪೌರ ಕಾರ್ಮಿಕರಾದ ಕಮಲಾ, ಸುವರ್ಣ ಇವರನ್ನು ಸನ್ಮಾನಿಸಲಾಯಿತು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಜಯಾನಂದ ಹೋಬಳಿದಾರ್ ಸ್ವಾಗತಿಸಿದರು. ಕಿರಣ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ಪ್ರಶಾಂತ ಪಡುವರಿ ವಂದಿಸಿದರು.

ಕಾರ್ಯಕ್ರಮಕ್ಕೂ ಮೊದಲು ಬಂಕೇಶ್ವರ ಗಣಪತಿ ದೇವಸ್ಥಾನದಿಂದ ಸೇನೇಶ್ವರ ದೇವಸ್ಥಾನದವರೆಗೆ ಭಜನಾ ತಂಡಗಳು, ಸ್ತಬ್ಧ ಚಿತ್ರಗಳ ಬೃಹತ್ ಶೋಭಾಯಾತ್ರೆ ನಡೆಯಿತು.

Leave a Reply

Your email address will not be published. Required fields are marked *

3 × four =