ಬೈಂದೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗ ಇದರ ಬೈಂದೂರು ಕೆ.ಎಸ್.ಆರ್.ಟಿ.ಸಿ ನೂತನ ಬಸ್ ನಿಲ್ದಾಣದ ಉದ್ಘಾಟನ ಸಮಾರಂಭ ಬೈಂದೂರಿನಲ್ಲಿ ನಡೆಯಿತು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಈ ಬಾರಿ ಸುಮಾರು 900 ನೂತನ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಖರೀದಿಸುವ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅದರಲ್ಲಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅವಳಿ ಜಿಲ್ಲೆಗಳಿಗೆ ಹೆಚ್ಚಿನ ಬಸ್ ನೀಡಲಾಗುವುದು, ಅಲ್ಲದೇ ಮಂಗಳೂರು ನಗರಕ್ಕೆ ಸುಮಾರು 100 ಎಲೆಕ್ಟ್ರಿಕ್ ಬಸ್ ಕಲ್ಪಿಸಲಾಗುವುದು ಎಂದರು.

ಕೊಲ್ಲೂರು ಪ್ರಾಧಿಕಾರ ರಚನೆ ಮಾಡಲು ಸರಕಾರದ ಮಟ್ಟದಲ್ಲಿ ಪ್ರಯತ್ನ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಾಧಿಕಾರ ರಚಿಸಬೇಕೆಂಬ ಬೇಡಿಕೆಯಿದೆ.ಆದರೆ ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗಿ ಕೇವಲ ಒಂದು ವರ್ಷ ಕಳೆದಿದೆ ಅಷ್ಟೇ.ಈಗಿರುವ ವ್ಯವಸ್ಥಾಪನಾ ಸಮಿತಿಯ ಅಧಿಕಾರವಧಿ  ಮುಗಿದ ಬಳಿಕ ನೂತನ ಪ್ರಾಧಿಕಾರ ರಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೈಂದೂರು ನೂತನ ಬಸ್ ನಿಲ್ದಾಣಕ್ಕೆ ಮೂಕಾಂಬಿಕಾ ಬಸ್ ನಿಲ್ದಾಣವಾಗಿ ನಾಮಕರಣ ಮಾಡಲು ಪ್ರಕ್ರಿಯೆ ಮೂಲಕ ಅಂತಿಮಗೊಳಿಸುತ್ತೇನೆ ಹಾಗೂ ಈಗಿರುವ ಸದಸ್ಯರ ಅವಧಿ ಮುಗಿದ ಬಳಿಕ ಕೊಲ್ಲೂರು ಪ್ರಾಧಿಕಾರ ರಚನೆ ಮಾಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದ ಅವರು ರಾಜ್ಯದಲ್ಲಿ 900 ಹೊಸ ಸರಕಾರಿ ಬಸ್ಸುಗಳ ಖರೀದಿ ಟೆಂಡರ್ ಪೂರ್ಣಗೊಂಡಿದೆ.ಉಡುಪಿ -ಮಂಗಳೂರು ವಿಭಾಗಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಹಾಗೂ ಮಂಗಳೂರು ವಿಭಾಗಕ್ಕೆ 100 ಹೊಸ ವಿದ್ಯುತ್ ಚಾಲಿತ ಬಸ್ಸುಗಳ ಪ್ರಯಾಣ ಆರಂಭಿಸಲಿದೆ. ಬೈಂದೂರು – ಕುಂದಾಪುರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಬಹುದಿನಗಳ ಬೇಡಿಕೆಯಾದ ಬೈಂದೂರು ಬಸ್ ನಿಲ್ದಾಣ ಉದ್ಘಾಟನೆಗೆ ಇಲ್ಲಿನ ಮಾಧ್ಯಮ ಮತ್ತು ಸಾರ್ವಜನಿಕರ ಕಾಳಜಿ ಕಾರಣವಾಗಿದೆ.ರಾಜಕೀಯ ಮೆರೆತು ಅಭಿವೃದ್ದಿ ವಿಚಾರದಲ್ಲಿ ಒಂದಾಗಬೇಕು ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗ ಸೇರಿದಂತೆ 35ಕ್ಕೂ ಅಧಿಕ ಕಡೆ ಬಸ್ ಸಂಚಾರ ಆರಂಭಿಸಬೇಕಿದೆ.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರ ಪ್ರಯತ್ನ ಸೇರಿದಂತೆ ಬೈಂದೂರು ಬಸ್ ನಿಲ್ದಾಣಕ್ಕೆ ಎಲ್ಲರ ಪರಿಶ್ರಮ ಕಾರಣವಾಗಿದೆ. ವಿಳಂವಾಗಿರುವ ಕಾರಣ ಸಚಿವರ ಗಮನಕ್ಕೆ ತರಲಾಗಿದ್ದು  ಸಚಿವರು ಆಗಮಿಸಿ ಉಧ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬೈಂದೂರು ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ , ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಗಿರೀಶ್ ಬೈಂದೂರು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಜಿ.ಪಂ ಮಾಜಿ ಸದಸ್ಯರಾದ ಗೌರಿ ದೇವಾಡಿಗ, ಸುರೇಶ್ ಬಟವಾಡಿ, ಮದನ್ ಕುಮಾರ್ ಉಪ್ಪುಂದ, ಕುಂದಾಪುರ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳವಳ್ಳಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳಿದಾರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿಪದಕ ವಿತರಿಸಿ ಸಮ್ಮಾನಿಸಲಾಯಿತು.ಗುತ್ತಿಗೆದಾರ ಪ್ರಭಾಕರ ಶೆಟ್ಟಿ ನೆಲ್ಯಾಡಿ ಹಾಗೂ ಶ್ರೀಧರ ಆಚಾರ್ಯ ರವರನ್ನು ಗೌರವಿಸಲಾಯಿತು.

ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪ್ರಿಯಾ ಪವನ್ ಕುಮಾರ್ ಸ್ವಾಗತಿಸಿದರು.ಶಿಕ್ಷಕ ಸುಬ್ರಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.ವಿಭಾಗೀಯ ಸಂಚಾರ ಅಧಿಕಾರಿ ಹೆಚ್.ಆರ್ ಕಮಲ್ ಕುಮಾರ್ ವಂದಿಸಿದರು.

ವರದಿ/ಗಿರಿ ಶಿರೂರು

 

 

 

Leave a Reply

Your email address will not be published. Required fields are marked *

three × 5 =