ಬೈಂದೂರು; ಕಾಮಗಾರಿ ಪೂರ್ಣಗೊಂಡು ಹಲವು ವರ್ಷ ಕಳೆದರು ಉದ್ಘಾಟನೆಯಾಗದ ಕಾಣದ ಬೈಂದೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಡಿ.27 ರಂದು ಉದ್ಘಾಟನೆ ಭಾಗ್ಯ ದೊರೆಯಲಿದೆ.ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬಸ್ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.ಅವರು ಶುಕ್ರವಾರ ನೂತನ ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿ ಬಳಿಕ ಪತ್ರಕರ್ತರ ಜೊತೆ ಮಾತನಾಡಿ 2018 ರಲ್ಲಿ ವಿಶೇಷ ಪ್ರಯತ್ನದ ಮೂಲಕ ಬೈಂದೂರಿನಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ 6 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಅನುಮೋದನೆ ದೊರಕಿಸಿಕೊಟ್ಟಿದೆ.ಕಾಮಗಾರಿ ವಿಳಂಬದಿಂದಾಗಿ ಬಸ್ ನಿಲ್ದಾಣ ಲೋಕಾರ್ಪಣೆ ವಿಳಂಬವಾಗಿತ್ತು.ಈ ಕುರಿತು ಮಾನ್ಯ ಸಾರಿಗೆ ಸಚಿವರ ಜೊತೆ ಮಾತನಾಡಿ ಉದ್ಘಾಟನೆ ದಿನ ನಿಗಧಿ ಮಾಡಲಾಗಿದೆ ಎಂದರು.
ಬಸ್ ಡಿಪೋ ಸ್ಥಾಪನೆಗೆ ಆದ್ಯತೆ: ಬೈಂದೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.ಈ ನೆಲೆಯಲ್ಲಿ ಬಸ್ ನಿಲ್ದಾಣದ ಜೊತೆಗೆ ಡಿಪೋ ಸ್ಥಾಪನೆಯಾಗಬೇಕಾಗಿದೆ.ಈ ಕುರಿತು ಸಚಿವರ ಗಮನಕ್ಕೆ ತರುವ ಜೊತೆಗೆ ಡಿಪೋ ಸ್ಥಾಪನೆ ಘೋಷಣೆ ಮಾಡಿಸುವ ಪ್ರಯತ್ನ ಮಾಡುತ್ತೇನೆ ಮತ್ತು ದಕ್ಷಿಣ ಭಾರತದ ಪ್ರಸಿದ್ದ ಕ್ಷೇತ್ರವಾದ ಕೊಲ್ಲೂರು ಹಾಗೂ ಬೈಂದೂರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಬೈಂದೂರು ಬಸ್ ನಿಲ್ದಾಣವನ್ನು ಮೂಕಾಂಬಿಕಾ ಬಸ್ ನಿಲ್ದಾಣವಾಗಿ ನಾಮಕರಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಕೆ.ಎಸ್.ಆರ್‌ಟಿ.ಸಿ ಡಿ.ಸಿ ರಾಜೇಶ್ ಶೆಟ್ಟಿ, ಸಾರಿಗೆ ವಿಭಾಗದ ಕಮಲ್ ಕುಮಾರ್,ತಾಂತ್ರಿಕ ವಿಭಾಗದ ವಿನಯ್,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ನಾಗರಾಜ ಗಾಣಿಗ,ಸದಾಶಿವ ಡಿ.ಪಡುವರಿ ಮೊದಲಾದವರು ಹಾಜರಿದ್ದರು.
ವರದಿ/ ಗಿರಿ ಶಿರೂರು