ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಇದರ ವತಿಯಿಂದ ಪಟ್ಟಣ ಪಂಚಾಯತ್ ಅವೈಜ್ಞಾನಿಕತೆ ರದ್ದುಪಡಿಸುವಂತೆ ಬ್ರಹತ್ ಪ್ರತಿಭಟನೆ ಹಾಗೂ ಬೈಕ್ ರ್‍ಯಾಲಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪ್ರತಿಭಟನೆ ನೇತ್ರತ್ವ ವಹಿಸಿ ಮಾತನಾಡಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಸೇರಿಸುವುದರಿಂದ ರೈತರಿಗೆ ತೊಂದರೆಯಾಗಿರುವುದು ಮತ್ತು ಆ ಕುರಿತು ರೈತರು ಹೋರಾಟ ನಡೆಸುತ್ತಿರುವುದು ಸ್ವಾಗತಾರ್ಹವಾಗಿದೆ.ಪಕ್ಷ, ಪಾರ್ಟಿ, ರಾಜಕೀಯ ಎಲ್ಲದರ ಜೊತೆಗೆ ಮೊದಲ ಆದ್ಯತೆ ರೈತರಿಗೆ.ಆಕ್ರಮ -ಸಕ್ರಮ ಅದಾಲತ್ ಮೂಲಕ 94ಸಿ ಮತ್ತು ಬಾಕಿ ಉಳಿದಿರುವ ಖಡತ ವಿಲೇವಾರಿಗೆ ಚುರುಕಾಗಿ ಕ್ರಮಗೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ.ರೈತರ ನ್ಯಾಯಯುತ ಬೇಡಿಕೆಗೆ ನಮ್ಮ ಸಂಪೂರ್ಣ ಸಹಕಾರವಿದೆ.ಇದರ ಜೊತೆಗೆ ಕೆಲವು ಕಾಂಗ್ರೆಸ್ ಮುಖಂಡರು ಶಾಸಕರ ನಿಲುವನ್ನು ಪ್ರಶ್ನಿಸಿದ ಪರಿಣಾಮ ಭಾರತೀಯ ಜನತಾ ಪಕ್ಷ ಮತ್ತು ಕಿಶಾನ್ ಘಟಕದ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ರೈತರಿಗೆ ಬೆಂಬಲ ನೀಡಿದ್ದೇವೆ ಮತ್ತು ಭಾರತೀಯ ಜನತಾ ಪಕ್ಷ ರೈತರ ಪರವಾಗಿದೆ ಎಂದರು.
ಧರಣಿ ನಡೆಯುತ್ತಿದ್ದ ವೇದಿಕೆಗೆ ಶಾಸಕರ ಬೇಟಿ; ಪ್ರತಿಭಟನೆ ಮುಗಿದ ಬಳಿಕ ಶಾಸಕರು ರೈತ ಸಂಘದ ಮುಂದಾಳತ್ವದಲ್ಲಿ ಧರಣಿ ನಡೆಯುತ್ತಿದ್ದ ವೇದಿಕೆಗೆ ಬೇಟಿ ನೀಡಿ ರೈತರ ಜೊತೆ ಮಾತನಾಡಿದರು ಮತ್ತು ಶಾಸಕನಾಗಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಬಿಜೆಪಿ ಚಿಹ್ನೆ ಇರುವ ಶಾಲನ್ನು ಧರಿಸಿ ವೇದಿಕೆಗೆ ಬಂದಿರುವುದನ್ನು ರೈತರು ಖಂಡಿಸಿದರು ಮತ್ತು ರೈತರ ವೇದಿಕೆಯಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದವಿಲ್ಲ ಎಂದರು.ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು ಬಳಿಕ ತಿಳಿಗೊಳಿಸಲಾಯಿತು.
ಬೈಂದೂರು ಸೇನೇಶ್ವರ ದೇವಸ್ಥಾನದಿಂದ ತಾಲೂಕು ಆಡಳಿತ ಸೌಧದ ವರೆಗೆ ಜಾಥಾ ನಡೆಸಲಾಯಿತು ಬಳಿಕ ಬೈಂದೂರು ತಹಶೀಲ್ದಾರ ಎಸ್.ರಾಮಚಂದ್ರಪ್ಪ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕುಮ್ಕಿ ಹೋರಾಟಗಾರ ಎಮ್.ಪಿ ಸತ್ಯನಾರಾಯಣ ಭಟ್,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಶಿವರಾಜ ಪೂಜಾರಿ,ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ,ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ,ಜೈಸನ್ ಮದ್ದೋಡಿ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.



















ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಕರಣ್ ಪೂಜಾರಿ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರುರು