ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ತೀರ್ಥಕ್ಷೇತ್ರ ಮಾತ್ರವಾಗಿರದೆ ಕೋಟ್ಯಾಂತರ ಭಕ್ತರ ಶ್ರದ್ದಾ ಕೇಂದ್ರವಾಗಿದೆ.ಇಂತಹ ಪವಿತ್ರ ಕ್ಷೇತ್ರದ ವಿರುದ್ದ ಷಡ್ಯಂತರ ರೂಪಿಸಿ ಅಪಪ್ರಚಾರಕ್ಕೆ ತೊಡಗಿರುವುದು ಸಮಸ್ತ ಹಿಂದೂಗಳ ಭಾವನೆಗಳಿಗೆ ಮಾಡಿದ ಅನ್ಯಾಯವಾಗಿದೆ.ಪೂಜ್ಯ ಖಾವಂದರ ಮತ್ತು ಶ್ರೀ ಕ್ಷೇತ್ರದ ವಿರುದ್ದ ಮಾಡುತ್ತಿರುವ ಅಪಪ್ರಚಾರ ಖಂಡನೀಯವಾಗಿದೆ.ಮಾತುಬಿಡ ಶ್ರೀ ಮಂಜುನಾಥ ಸ್ವಾಮಿ ಕೃಪೆಯಿಂದ ಕುತಂತ್ರಿಗಳ ಬಣ್ಣ ಬಯಲಾಗಿದೆ ಮತ್ತು ಇಂತವರಿಗೆ ತಕ್ಕ ಶಿಕ್ಷೆ ಆಗಲಿರುವ ದಿನ ಬಹಳ ದೂರವಿಲ್ಲ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹೇಳಿದರು ಅವರು ಬೈಂದೂರು ರೋಟರಿ ಭವನದಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರದ ಕುರಿತು ಹಾಗೂ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕುರಿತು ನಡೆಯುತ್ತಿರುವ ಅವಹೇಳನಕಾರಿ ಚಟುವಟಿಕೆಗಳನ್ನು ಖಂಡಿಸಿ.ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೈಂದೂರು ತಾಲೂಕು ಧರ್ಮಸ್ಥಳ ಅಭಿಮಾನಿಗಳ ವೇದಿಕೆ ವತಿಯಿಂದ ಜನಾಗ್ರಹ ಸಭೆ ಹಾಗೂ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಕರಾವಳಿ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಕೋಟ್ಯಾಂತರ ಭಕ್ತರ ಆರಾಧನಾ ಶ್ರದ್ದಾ ಕೇಂದ್ರವಾಗಿದೆ.ಯಾರು ಇಲ್ಲದಿದ್ದಾಗ ಧರ್ಮದೊಡೆಯ ಕೈ ಹಿಡಿಯುತ್ತಾನೆ ಎನ್ನುವ ನಂಬಿಕೆ ಇಂದಿಗೂ ಇದೆ.ಇಂತಹ ಶ್ರೀ ಕ್ಷೇತ್ರದ ಬಗ್ಗೆ ಹುರುಳಿಲ್ಲದೆ ಮಾಡಿದ ಆಪಪ್ರಚಾರ ಕ್ಷೇತ್ರದ ಭಕ್ತರಿಗೆ ಮಾಡಿದ ಅನ್ಯಾಯವಾಗಿದೆ.ರಾಜ್ಯದ ಕೋಟ್ಯಾಂತರ ಭಕ್ತರು ಖಾವಂದರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಸಮಾಜಮುಖಿ ಕಾರ್ಯದ ಜೊತೆಗಿದ್ದಾರೆ.ಹೀಗಾಗಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರನ್ನು ಎಂದಿಗೂ ಸಹಿಸುವುದಿಲ್ಲ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಧರ್ಮಸ್ಥಳದ ಪ್ರಕರಣದ ಗೊಂದಲಗಳು ಮತ್ತು ಅಪಪ್ರಚಾರಗಳಲ್ಲಿ ತೊಡಗಿಸಿಕೊಂಡಾಗ ರಾಜ್ಯ ಸರಕಾರ ಎಸ್.ಐ.ಟಿ ತನಿಖೆಗೆ ಆದ್ಯತೆ ನೀಡಿ ದಕ್ಷ ಅಧಿಕಾರಿಗಳನ್ನು ನೇಮಿಸಿರುವುದರಿಂದ ಅಪಪ್ರಚಾರ ಮಾಡುವವರ ಬಣ್ಣ ಬಯಲಾಗಿದೆ.ಸತ್ಯಾಸತ್ಯತೆ ಹೊರತರುವ ಮೂಲಕ ಸರಕಾರ ದಿಟ್ಟ ಕ್ರಮಕೈಗೊಳ್ಳುವ ಜೊತೆಗೆ ಕೋಟ್ಯಾಂತರ ಭಕ್ತರ ಭರವಸೆ ಉಳಿಸಿಕೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ನೀರೆ ಕೃಷ್ಣ ಶೆಟ್ಟಿ, ಎಸ್.ರಾಜು ಪೂಜಾರಿ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಉದ್ಯಮಿ ರಘುರಾಮ ಕೆ.ಪೂಜಾರಿ, ಕೃಷ್ಣ ಪೂಜಾರಿ,ವೆಂಕಟೇಶ ಕಿಣಿ, ರಾಮ ಮೇಸ್ತ, ಗೌರಿ ದೇವಾಡಿಗ,ನಾರಾಯಣ ಅಳ್ವೆಗದ್ದೆ,ನಾಗಯ್ಯ ಶೆಟ್ಟಿ,ನಾರಾಯಣ ಮೇಸ್ತ,ಪುಷ್ಪರಾಜ ಶೆಟ್ಟಿ,ರವೀಂದ್ರ ಶೆಟ್ಟಿ ಪಟೇಲ್,ರವೀಂದ್ರ ಶೆಟ್ಟಿ ಆರ್‍ಮಕ್ಕಿಹಾಗೂ ವಿವಿಧ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.









ಬಳಿಕ ಬೈಂದೂರು ರೋಟರಿ ಭವನದಿಂದ ಜಾಥಾ ನಡೆಸಿ ಉಪತಹಶೀಲ್ದಾರ ಲತಾ ಶೆಟ್ಟಿ ಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ವೇದಿಕೆಯ ಮುಖ್ಯಸ್ಥ ಸುಧಾಕರ ಆಚಾರ್ಯ ಸ್ವಾಗತಿಸಿದರು.ಹಿರಿಯ ಧಾರ್ಮಿಕ ಮುಖಂಡ ಸತೀಶ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರಾಮ ಶೆಟ್ಟಿ ಅತ್ತಿಕಾರ್ ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯ ಮುಖ್ಯಸ್ಥ ವಾಸು ಮೇಸ್ತ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು