ಬೈಂದೂರು: ಸರಕಾರ ಒಂದು ಸಣ್ಣ ಕಾಮಗಾರಿ ಆರಂಭಿಸಬೇಕಾದರೆ ಸಹಜವಾಗಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ, ಒಂದಿಷ್ಟು ಬ್ಯಾನರ್, ಗ್ರಾಮ ಪಂಚಾಯತ್ ಅನುಮತಿ ಎಂದು ಒಂದಿಷ್ಟು ನಿಯಮಗಳ ಪಾಲನೆಯಾಗುತ್ತದೆ.ಆದರೆ ಬೈಂದೂರು ಕ್ಷೇತ್ರದ ಹೇರಂಜಾಲು ಬಳಿ ನಿರ್ಮಿಸುತ್ತಿರುವ 72 ಕೋಟಿ ವೆಚ್ಚದ ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆ ಕುರಿತು ಸ್ಥಳೀಯ ಗ್ರಾಮ ಪಂಚಾಯತ್‌ಗಳಿಗೂ ಮಾಹಿತಿ ನೀಡದೆ, ಗುದ್ದಲಿ ಪೂಜೆ ಕೂಡ ನಡೆಯದೆ.ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ.ಹೇರಂಜಾಲು ಎನ್ನುವ ಗ್ರಾಮವನ್ನು ಬಳ್ಳಾರಿ ಕಿಂಗ್‌ಡಮ್ ಮಾಡುವ ಹುನ್ನಾರದಂತಿದೆ.ಆರಂಭದಿಂದಲೂ ನೂರಾರು ಸುಳ್ಳುಗಳ ಮೂಲಕ ಜನರ ದಾರಿ ತಪ್ಪಿಸಲಾಗಿದೆ.ಈ ಕುರಿತು ಪ್ರಶ್ನಿಸುವವರ ಮೇಲೆ ಹಲ್ಲೆ ಪ್ರಯತ್ನ ನಡೆಯುತ್ತಿದೆ.ನದಿ ಹಾಗೂ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿ ಕೆಲವರಿಗೆ ಕೋಟ್ಯಾಂತರ ರೂಪಾಯಿ ಗಳಿಸುವ ದಂದೆಯಾಗಿ ಬಿಟ್ಟಿದೆ.ಜನಪರ ಯೋಜನೆಗಳನ್ನು ಸರ್ಕಾರದ ಮುಂದಾಳತ್ವದಲ್ಲಿ ನೀಡಬೇಕು.ಆದರೆ ಗುತ್ತಿಗೆದಾರರೆ ಸರ್ಕಾರ ಆಗೋದನ್ನು ನಮ್ಮ ರೈತ ಜನತೆ ಒಪ್ಪೋದಿಲ್ಲ ಎಂದು ಬೈಂದೂರು ತಾಲೂಕು ರೈತ ಸಂಘದ ಪ್ರತಿನಿಧಿ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಅವರು ಗುರುವಾರ ಉಪ್ಪುಂದದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ ಯಾಡಮಾವಿನ ಹೊಳೆಗೆ ನಾಲ್ಕು ವರ್ಷದಲ್ಲಿ 3 ವೆಂಟೆಂಡ್ ಡ್ಯಾಮ್‌ಗಳು ನಿರ್ಮಾಣವಾಗಿದೆ.ಬೈಂದೂರಿನ ಬಹುತೇಕ ನದಿಗಳಿಗೆ ಅಗತ್ಯ ಇಲ್ಲದ ಕಡೆಗಳಲ್ಲಿ ಕೆಲವು ಕಡೆ ಒಂದು ನದಿಗೆ ಎರಡು ಮೂರು ಕಡೆ ವೆಂಟೆಂಡ್ ಡ್ಯಾಮ್ ನಿರ್ಮಾಣವಾಗಿದೆ.ಕೆಲವು ಕಡೆ ಒಂದು ಕೋಟಿ ಅಂದಾಜು ಇದ್ದರೆ ಕಾಮಗಾರಿ ಮುಗಿಯುವಾಗ ಎರಡು ಕೋಟಿಯಾಗುತ್ತದೆ.ಎಲ್ಲವೂ ಕೂಡ ಅಧಿಕಾರಿಗಳಿಗಿಂತ ಗುತ್ತಿಗೆದಾರರ ಸರ್ಕಾರದ ಹಂತದಲ್ಲಿ ಪ್ರಭಾವ ಬೆಳೆಸುತ್ತಾರೆ.ವರಾಹಿ ಹೊರತುಪಡಿಸಿದರೆ ಬೈಂದೂರಿನಲ್ಲಿ ಅತೀ ದೊಡ್ಡ ನೀರಾವರಿ ಯೋಜನೆ ಹೇರಂಜಾಲಿನಲ್ಲಿ ನಡೆಯುತ್ತಿದ್ದು ಸ್ಥಳೀಯ ಕೃಷಿಕರ ಬೇಡಿಕೆ ಮತ್ತು ವಾಸ್ತವತೆ ತಿಳಿಸದೆ ನಡೆಯುವ ಕಾಮಗಾರಿ ವಿರುದ್ದ ನಮ್ಮ ಹೋರಾಟವಿದೆ.ಅಧಿಕಾರಿಗಳು ತಕ್ಷಣ ಸ್ಪಂಧಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಈ ಕುರಿತು ಫೆ.23 ರಂದು ಮದ್ಯಾಹ್ನ 03 ಗಂಟೆಗೆ ನಾಗೂರಿನಲ್ಲಿ ಸಾರ್ವಜನಿಕ ಸಭೆ ಕರೆಯಲಾಗಿದೆ ಎಂದರು.ಮುಂದಿನ ದಿನದಲ್ಲಿ ಇಂತಹ ಅಸಮರ್ಪಕ ಮಾಹಿತಿ ನೀಡಿ ನಡೆಸುವ ಕಾಮಗಾರಿ ವಿರುದ್ದ ನೇರ ಹೋರಾಟ ಮಾಡಲಾಗುತ್ತದೆ.ಸರಕಾರದ ಗಮನ ಸೆಳೆಯುವ ಜೊತೆಗೆ ಜನರಿಗೆ ನ್ಯಾಯ ನೀಡಲು ಸಾರ್ವಜನಿಕರ ನಿರ್ದೇಶನದಂತೆ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಯಂತಿ ಎನ್.ಐತಾಳ್ ಹೇರಂಜಾಲು,ಆದಿ ಡ್ರಾವಿಡ ಸಂಘಟನೆಯ ಸದಸ್ಯ ರಾಘವೇಂದ್ರ ಹೇರಂಜಾಲು,ಹಿಂದೂಹಿತರಕ್ಷಣಾ ಸಮಿತಿಯ ಸಂಪರ್ಕ ಪ್ರಮುಖ ಕೃಷ್ಣ ಪೂಜಾರಿ ಹೇರಂಜಾಲು,ವೇದನಾಥ್ ಹೇರಂಜಾಲು ಹಾಜರಿದ್ದರು.
