ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ನೇತ್ರತ್ವದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಒಂದು ವರ್ಷ ಪೂರೈಸಿದೆ ರೈತರ ಬೇಡಿಕೆಗೆ ನ್ಯಾಯ ಸಿಗದ ಹಿನ್ನಲೆಯಲ್ಲಿ ಆಕ್ರೋಶಗೊಂಡ ರೈತರು ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತ ಪಡಿಸಿ ಬ್ರಹತ್ ಪ್ರತಿಭಟನೆ ನಡೆಸಿದರು.

ಮಾಡು ಇಲ್ಲವೆ ಮಡಿ ನಿರ್ಧಾರ: ಕಳೆದ ಒಂದು ವರ್ಷದಿಂದ ರೈತರು ಹತ್ತಾರು ಬಾರಿ ಬೇಡಿಕೆ ನೀಡಿ ಮನವಿ ನೀಡಿದ್ದರು.ಜಿಲ್ಲಾಧಿಕಾರಿ ಕಛೇರಿ ಸೇರಿದಂತೆ ಹಲವಾರು ಪ್ರತಿಭಟನೆ ನಡೆಸಿ ಶುಕ್ರವಾರ ಒಂದೋ ನ್ಯಾಯ ಸಿಗಬೇಕು ಇಲ್ಲವಾದರೆ  ನ್ಯಾಯ ಸಿಗುವುದಿಲ್ಲ ಎಂದು ಸ್ಪಷ್ಟ ಪಡಿಸಬೇಕು ಎಂದು ಪಟ್ಟು ಹಿಡಿದ ರೈತರು ಮಾಡು ಇಲ್ಲವೆ ಮಡಿ ಎನ್ನುವಂತೆ ಯಾವುದೆ ಮನ ಓಲೈಕೆಗೂ ಬಗ್ಗದೆ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಪಾದಯಾತ್ರೆ ನಡೆಸಿ ಬಳಿಕ ಬೈಂದೂರು ಜಂಕ್ಷನ್ ಬಳಿ ರಸ್ತೆ ತಡೆ ನಡೆಸಿ ಜಗ್ಗದ ರೈತರಿಗೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಕರೆ ಮಾಡಿ ಜಿಲ್ಲಾಧಿಕಾರಿ ಜೊತೆ ಬರುವುದಾಗಿ ತಿಳಿಸಿದ ಬಳಿಕ ಮೆರವಣಿಗೆಯಲ್ಲಿ ಪಾದಯಾತ್ರೆಯ ಮೂಲಕ ಸಾಗಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಸಾವಿರಾರು ರೈತರು ಜಮಾಯಿಸಿದರು.

ಸ್ಥಳಕ್ಕೆ ಬೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್‌ ಮಾತನಾಡಿ ಈಗಾಗಲೆ ಸರಕಾರದ ಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.ಇದಕ್ಕೆ ಸಮ್ಮತಿಸದ ರೈತರು ಡಿಸಿ ಆಗಮನಕ್ಕೆ ಪಟ್ಟು ಹಿಡಿದರು.

ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಭಾಗಿ; ರೈತರ ಪ್ರತಿಭಟನೆಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಭಾಗವಹಿಸಿದರು ಈ ಸಂಧರ್ಭದಲ್ಲಿ ಮಾತನಾಡಿ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ನಾಯಕರು ರೈತರಿಗೆ ನಿರಂತರ ಅನ್ಯಾಯ ಮಾಡಿದ್ದಾರೆ.ಒಂದು ವರ್ಷದ ಹೋರಾಟ ಇದು ರಾಜ್ಯಕ್ಕೆ ಮಾದರಿ.ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ರೈತರನ್ನು ಇಷ್ಟೊಂದು ದಿನ ಕಾಯಿಸಿರುವುದು ಸರಿಯಲ್ಲ.ಹೋರಾಟದಿಂದ ಮಾತ್ರ ನ್ಯಾಯ ಪಡೆಯಲು ಸಾಧ್ಯ.ಹೀಗಾಗಿ ಅಧಿಕಾರದಲ್ಲಿರುವವರ ಕುರ್ಚಿ ಅಲ್ಲಾಡಿಸಿದಾಗ ಮಾತ್ರ ಭಯದ ಅನುಭವ ಆಗುತ್ತದೆ ಎಂದರು.

ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಬೇಟಿ  ನೀಡಿ ರಾಜ್ಯ ಸರಕಾರದ ಅಧಿಕಾರಿಗಳ ಜೊತೆ ಮಾತನಾಡಿ ನ್ಯಾಯ ಒದಗಿಸುವ ಪ್ರಯತ್ನ ಮಾಡಿ ರೈತರ ಪರ ನಿಲ್ಲುವುದಾಗಿ ತಿಳಿಸಿದರು .

ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಆಗಮಿಸಿ ಮುಖ್ಯಮಂತ್ರಿಗಳ ಜೊತೆ ರೈತರ ನಿಯೋಗ ಬೇಟಿ ಮಾಡಿಸಿ ಗಮನ ಸೆಳೆಯುವ ಭರವಸೆ ನೀಡಿದರು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗಗಳ ನ್ಯಾಯಕ್ಕಾಗಿ ಕಳೆದ ಒಂದು ವರ್ಷದಿಂದು ಸಾವಿರಾರು ರೈತರು ಧರಣಿ ನಡೆಸಿದ್ದಾರೆ.ಒಂದು ವರ್ಷ ಕಳೆದರು ಸರಕಾರದಿಂದ ನ್ಯಾಯ ದೊರೆಕಿಲ್ಲ.ಇಂದು ನ್ಯಾಯ ಪಡೆಯದೆ ಸ್ಥಳದಿಂದ ಹಿಂದಿರುಗುವುದಿಲ್ಲ.ರೈತರ ತಾಳ್ಳೆಯ ಕಟ್ಟೆ ಒಡೆದಿದೆ.ನ್ಯಾಯ ಸಿಗುವವರೆಗೆ ಸ್ಥಳದಿಂದ ಕದಲುವುದಿಲ್ಲ ಮತ್ತು ಜಿಲ್ಲಾಡಳಿತದ ಬೇಜವ್ದಾರಿಯಾಗಿದೆ ಎಂದರು.

t;

ಪಿ ಡಿ ಅಮಾನತಿಗೆ ಆಗ್ರಹ; ನಗರಾಭಿವೃದ್ದಿ ಜಿಲ್ಲಾ ನಿರ್ದೇಶಕರು ವರದಿ ನೀಡಲು ವಿಳಂಬ ಮಾಡಿದ್ದಾರೆ.ಮಾತ್ರವಲ್ಲದೆ ಹಲವು ಬಾರಿ ಮನವಿ ನೀಡಲು ಕರೆದರು ಭಾಗವಹಿಸಿರಲಿಲ್ಲ.ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಅವರನ್ನು ಶೀಘ್ರವಾಗಿ ಅಮಾನತುಗೊಳಿಸಬೇಕು ಎಂದು ರೈತರು ಆಗ್ರಹಿಸಿದರು.

ಅಸ್ವಸ್ಥಗೊಂಡ ರೈತರು:  ಪ್ರತಿಭಟನೆ ವೇಳೆ ಸುಮಾರು ಎರಡು ಗಂಟೆ ರಸ್ತೆ ತಡೆ ನಡೆಸಿದ ವೇಳೆ ಆರು ರೈತರು ಅಸ್ವಸ್ಥಗೊಂಡರು.ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ತಹಶೀಲ್ದಾರ ರವಿರಾಜ್ ದೀಕ್ಷಿತ್,ಪಟ್ಟಣ ಪಂಚಾಯತ್ ಅಧಿಕಾರಿ ಅಜಯ್ ಭಂಡಾರ್ಕರ್,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ವಿವಿಧ ಮುಖಂಡರು ಹಾಗೂ ರೈತ ಮುಖಂಡರು ಹಾಜರಿದ್ದರು.

ಅರುಣ್ ಕುಮಾರ್ ಶಿರೂರು ಸ್ವಾಗತಿಸಿದರು.ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

ವರದಿ/ಚಿತ್ರ: ಗಿರಿ ಶಿರೂರು

 

Leave a Reply

Your email address will not be published. Required fields are marked *

four × 3 =