ಬೈಂದೂರು: ಕೇಂದ್ರ ಸರಕಾರದ ಬಹುನಿರೀಕ್ಷಿತ ಕುಡಿಯುವ ನೀರು ಯೋಜನೆ ಮತ್ತು ಜಲಜೀವನ್ ಮಿಷನ್ ಕಾಮಗಾರಿ ನಿಧಾನಗತಿ ಪ್ರಗತಿಗೆ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ವಿವಿಧ ಇಲಾಖೆಯ ಕಾಮಗಾರಿ ಪ್ರಗತಿ ಮಾಹಿತಿ ಪಡೆದರು.ಈ ಹಿಂದೆ ಮೂರು ಬಾರಿ ಸಭೆ ನಡೆದಾಗಲು ಅಧಿಕಾರಿಗಳಿಂದ ಪೂರ್ಣಗೊಳ್ಳದ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಂಸದರು 585 ಕೋಟಿ ರೂಪಾಯಿ ಅನುದಾನದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ 199 ಕೋಟಿ ಅನುದಾನದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದೆ.ಆದರೆ ಯಾವುದೇ ಗ್ರಾಮಗಳಲ್ಲೂ ಇದುವರೆಗೆ ನೀರು ಸರಬರಾಜು ಆಗಿಲ್ಲ. ಪ್ರತಿ ಸಭೆಯಲ್ಲಿ ಸಬೂಬು ನೀಡುವುದು ಹೊರತುಪಡಿಸಿದರೆ ಪ್ರಗತಿ ಕಾಣುತ್ತಿಲ್ಲ.ಹೀಗಾಗಿ ಕಥೆ ಹೇಳುವುದು ಬಿಟ್ಟು ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಈಗಾಗಲೇ 52 ಭಾಗಗಳಲ್ಲಿ ಪಂಚಾಯತ್ ಮಟ್ಟದ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿರುವ ವರದಿ ನೀಡಿದ್ದು ಸಮಸ್ಯೆ ಇರುವ ವ್ಯಾಪ್ತಿ ಹೊರತುಪಡಿಸಿ ಉಳಿದ ಕಡೆ ಪಂಚಾಯತ್ ನೀರಿನ ಮೂಲ ಬಳಸಿಕೊಂಡು ಜಲಜೀವನ್ ಮಿಷನ್ ಪೈಪ್‌ಲೈನ್‌ನಲ್ಲಿ ನೀರು ಸರಬರಾಜು ಮಾಡಲು ತಿಳಿಸಿದರು.ಡಿಸೆಂಬರ್ ಅಂತ್ಯದೊಳಗೆ ನೀರಿನ ಪೂರೈಕೆ ಸಿದ್ದತೆ ನಡೆಸಬೇಕು ಎಂದು ಆಗ್ರಹಿಸಿದರು.ಈಗಾಗಲೇ 178 ಕೋಟಿ ರೂಪಾಯಿ ಪಾವತಿಯಾಗಿದೆ.ಕಾಮಗಾರಿ ಮಾತ್ರ ಪೂರ್ಣಗೊಳ್ಳುವ ಲಕ್ಷಣಗಳಿಲ್ಲ.ಹೀಗಾಗಿ ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಿದರು.
4 ಕಡೆ ಅಂಡರ್‌ಪಾಸ್: ರಾಷ್ಟ್ರೀಯ ಹೆದ್ದಾರಿ ವತಿಯಿಂದ ಬೈಂದೂರು ಕ್ಷೇತ್ರಕ್ಕೆ ವಿಶೇಷ ಅನುದಾನ ಮಂಜೂರಾಗಿದ್ದು ತಲ್ಲೂರು, ತ್ರಾಸಿ, ಹೆಮ್ಮಾಡಿ, ಯಡ್ತರೆಯಲ್ಲಿ ಅಂಡರ್ ಪಾಸ್ ಅಥವಾ ಪ್ಲೈ ಓವರ್ ಮಂಜೂರಾಗಿದೆ.ಆರಾಟೆ, ಸಂದೀಪನ್ ಶಾಲೆ ಹಾಗೂ ಶಿರೂರು ಕೆಳಪೇಟೆಯಿಂದ ನೀರ್ಗದ್ದೆಯವರೆಗೆ ಸರ್ವಿಸ್ ರಸ್ತೆ ಮಂಜೂರಾಗಿದ್ದು ತಾಂತ್ರಿಕ ವರದಿ ಬಳಿಕ ಕಾಮಗಾರಿ ಆರಂಭಿಸಲಾಗುವುದು.ಕುಂದಾಪುರ -ಗಂಗೊಳ್ಳಿ ಬಹುನಿರೀಕ್ಷಿತ ಸೇತುವೆ ನಿರ್ಮಾಣದಿಂದ ಗಂಗೊಳ್ಳಿಯಿಂದ ಕುಂದಾಪುರಕ್ಕೆ 13 ಕಿ.ಮೀ ಸುತ್ತುಬಳಸಿ ಬರಬೇಕಾಗಿತ್ತು.ಈಗ ಕೇವಲ 1 ಕಿ.ಮೀ ನಲ್ಲಿ ಕುಂದಾಪುರಕ್ಕೆ ತೆರಳಬಹುವುದಾಗಿದೆ ಎಂದರು.ಬೈಂದೂರು ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 50 ಮೊಬೈಲ್ ಟವರ್ ನಿರ್ಮಾಣವಾಗಲಿದೆ ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್,ಬೈಂದೂರು ತಹಶೀಲ್ದಾರ ರಾಮಚಂದ್ರಪ್ಪ,ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಹಾಗೂ ದಿಶಾ ಸಮಿತಿ ಸದಸ್ಯರು ಹಾಜರಿದ್ದರು.
ವರದಿ/ಗಿರಿ ಶಿರೂರು