ಬೈಂದೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಕೋರಿಕೆಗೆ ಪ್ರಧಾನ ಆದ್ಯತೆ ನೀಡಬೇಕಿದೆ.ಅದರಲ್ಲೂ ರೈತರಿಗೆ ಸಂಕಷ್ಟವಾದರೆ ಸರಕಾರ,ವಿಶೇಷ ಮುತುವರ್ಜಿ ವಹಿಸುತ್ತದೆ.ಆದರೆ ಬೈಂದೂರಿನಲ್ಲಿ ರೈತರ ಸಂಘದ ಮುಂದಾಳತ್ವದಲ್ಲಿ ಗ್ರಾಮೀಣ ಭಾಗದ ರೈತರು 9 ದಿನದಿಂದ ಧರಣಿ ನಡೆಸುತ್ತಿದ್ದಾರೆ.ಆದರೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ.ಒಂದೊಮ್ಮೆ ಈ ವಿಳಂಬದಿಂದ ಗ್ರಾಮೀಣ ರೈತರಿಗೆ ಅನ್ಯಾಯವಾದರೆ ಅದಕ್ಕೆ ಜಿಲ್ಲಾಡಳಿತ ನೇರ ಹೊಣೆ ಎಂದು ರೈತ ಮುಖಂಡ ಅರುಣ್ ಕುಮಾರ್ ಶಿರೂರು ಹೇಳಿದರು ಅವರು ಮಂಗಳವಾರ ಬೈಂದೂರಿನಲ್ಲಿ ರೈತ ಸಂಘದ ವತಿಯಿಂದ ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿಧಿ೯ಷ್ಟಾವಧಿ ಧರಣಿಯ 9ನೇ ದಿನದ ನೇತ್ರತ್ವ ವಹಿಸಿ ಮಾತನಾಡಿ ನಮ್ಮದು ನ್ಯಾಯಯುತವಾದ ಹೋರಾಟ.ಪಕ್ಷಾತೀತವಾಗಿ ಎಲ್ಲರೂ ಕೂಡ ಗ್ರಾಮೀಣ ಭಾಗದ ರೈತರಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕೆನ್ನುವ ಆಗ್ರಹ ಇದೆ.ಇದರ ನಡುವೆ ತೆರೆಮರೆಯಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಪ್ರತಿಷ್ಠೆಯ ವಿಚಾರಗಳು ನಮ್ಮ ಅರಿವಿಗೆ ಬಂದಿದೆ.ಸಮರ್ಪಕವಾದ ನಿರ್ಣಯ ದೊರೆಯದಿದ್ದರೆ ಮುಂದೆ ಎಲ್ಲ ತೆರೆಮರೆಯ ಕಸರತ್ತುಗಳು ಬೆತ್ತಲಾಗುತ್ತದೆ.ಒಂದೊಮ್ಮೆ ರೈತರ ಬೇಡಿಕೆಗೆ ನ್ಯಾಯ ಸಿಗಲು ವಿಳಂಬವಾದರೆ ಅದಕ್ಕೆ ಜಿಲ್ಲಾಡಳಿತ ನೇರ ಹೊಣೆಯಾಗುತ್ತದೆ.ಹೀಗಾಗಿ ಆತ್ಮಸಾಕ್ಷಿಗೆ ಪೂರಕವಾದ ಪ್ರಯತ್ನ ಮಾಡಿ ರೈತರಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.

9ನೇ ದಿನದ ಅನಿಧಿ೯ಷ್ಠಾವಧಿ ಧರಣಿಯಲ್ಲಿ ಎತ್ತಬೇರು ಭಾಗದ ರೈತರು ನಾಸಿಕ್ ಬ್ಯಾಂಡ್ ಬಾರಿಸುವ ಮೂಲಕ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಸುಭಾಷ್ ಗಂಗನಾಡು,ಮಣಿಕಂಠ ದೇವಾಡಿಗ ಮುಂತಾದವರು ಹಾಜರಿದ್ದರು. ವೀರಭದ್ರ ಗಾಣಿಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ/ಗಿರಿ ಶಿರೂರು