ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕನಾಗಿ ಜನಸೇವೆ ಮಾಡಿದ್ದೇನೆ.ಯೋಜನೆಗಳು, ನಿಯಮ, ವ್ಯವಸ್ಥೆಗಳ ಬಗ್ಗೆ ಆಳವಾದ ಅನುಭವ ಇರುವವರ ಜೊತೆ ರಾಜಕೀಯವಾಗಿ ಬೆಳೆದಿದ್ದೇನೆ.ಈ ಹಿಂದೆ ಬಿಜೆಪಿ ಶಾಸಕರು ಅಧಿಕಾರದಲ್ಲಿರುವಾಗಲು ಸೈದಾಂತಿಕ ರಾಜಕಾರಣದ ಎಲ್ಲೆ ಮೀರಿಲ್ಲ.ರಾಜಕಾರಣದ ಮಿತಿ ಮತ್ತು ನಿಯಮಗಳನ್ನು ಮೀರಿ ರಾಜಕಾರಣ ಮಾಡಿಲ್ಲ ಆದರೆ ಈಗಿನ ಬೈಂದೂರು ಕ್ಷೇತ್ರದ ಶಾಸಕರು ಸಣ್ಣಮಟ್ಟದ ರಾಜಕೀಯಕ್ಕೆ ಮುಂದಾಗಿದ್ದಾರೆ.ಸರಕಾರದ ನಿಯಮದಲ್ಲಿ ಆಕ್ರಮ -ಸಕ್ರಮ ಆದಾಲತ್ ನಡೆಸಲು ಅವಕಾಶಗಳಿಲ್ಲ.ಆದರೆ ಬೈಂದೂರಿನಲ್ಲಿ ಆಕ್ರಮ -ಸಕ್ರಮ ಸಮಿತಿ ಸದಸ್ಯರಿಗೂ ಮಾಹಿತಿ ನೀಡದೆ ಅದಾಲತ್ ಹೆಸರಿನಲ್ಲಿ ಗ್ರಾಮೀಣ ಭಾಗದ ಕೃಷಿಕರಿಗೆ ಅನಗತ್ಯ ಗೊಂದಲ ಉಂಟು ಮಾಡಿದ್ದಾರೆ.ಮಾತ್ರವಲ್ಲದೆ ಇದರಿಂದಾಗಿ ಸುಮಾರು 16 ಸಾವಿರ ಅರ್ಜಿಗಳು ವಜಾಗೊಳ್ಳಲು ಶಾಸಕರೆ ಕಾರಣರಾಗುತ್ತಾರೆ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.ಅವರು ಶನಿವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕಳೆದ ಐದು ವರ್ಷ ಬಿಜೆಪಿ ಶಾಸಕರಿದ್ದಾಗ ಇವರು ಎಷ್ಟು ಅರ್ಜಿಗಳ ವಿಲೇವಾರಿ ಮಾಡಿದ್ದಾರೆ..ಕ್ಷೇತ್ರದ ಅಭಿವೃದ್ದಿ ಹಿತದೃಷ್ಟಿಯಿಂದ ಸಣ್ಣಮಟ್ಟದ ರಾಜಕೀಯ ಶೋಭೆ ತರುವುದಿಲ್ಲ.ವಂಡ್ಸೆ ಹೋಬಳಿ ಆಕ್ರಮ -ಸಕ್ರಮ ಅಧ್ಯಕ್ಷರಾಗಿ ಸರಕಾರ ನನ್ನನ್ನು ನೇಮಿಸಿದೆ.ಮಾತ್ರವಲ್ಲದೆ ಮೂರು ಜನ ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರು ಜೊತೆಗೆ ಆಕ್ರಮ -ಸಕ್ರಮ ಸಮಿತಿ ಸದಸ್ಯರು ಇದ್ದಾರೆ.ಈ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಸಭೆ ನಡೆದರೆ ಸಭೆ ನಡಾವಳಿ ಅಂಗೀಕಾರ ಕೂಡ ಆಗುವುದಿಲ್ಲ.ವಂಡ್ಸೆಯಲ್ಲಿ ಶಾಸಕರ ಕಾರ್ಯಕರ್ತರಿಂದ ಕೋರ್ಟ್‌ನಲ್ಲಿ ದಾವೆ ಹೂಡುವ ಮೂಲಕ ಆಕ್ರಮ -ಸಕ್ರಮ ವಿಲೇವಾರಿ ಆಗದಂತೆ ತಡೆದಿದ್ದಾರೆ.ಇದರಿಂದ ಸಾವಿರಾರು ಅರ್ಜಿದಾರರಿಗೆ ತೊಂದರೆಯಾಗುತ್ತಿದೆ.ಪ್ರಚಾರಕ್ಕಾಗಿ ಕಾರ್ಯಕ್ರಮ ಆಯೋಜಿಸಿ ಅಧಿಕಾರಿಗಳಿಗೆ ಧರಣಿ ಮಾಡುತ್ತೇವೆ ಎಂದು ಬೆದರಿಸುವುದು ಉತ್ತಮ ರಾಜಕಾರಣವಲ್ಲ. ಆಕ್ರಮ -ಸಕ್ರಮ 94 ಸಿ ಅಧ್ಯಕ್ಷರ ಏಕಪಕ್ಷೀಯ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಬೈಂದೂರು ಅಗ್ನಿಶಾಮಕ ಕಟ್ಟಡ ಉದ್ಘಾಟನೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದ ಗೃಹಸಚಿವರು ವಿಶೇಷ ಅನುದಾನ ನೀಡಿದ್ದಾರೆ.ಬೈಂದೂರು ಕ್ಷೇತ್ರಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಬರುವ ಕಾರ್ಯಕ್ರಮ ಸಿದ್ದತೆ ನಡೆಯುತ್ತಿದೆ.ಆದರೆ ಬೈಂದೂರು ಶಾಸಕರು ಅವರದ್ದೆ ಆದ ರೀತಿಯಲ್ಲಿ ಪ್ರಚಾರಕ್ಕಾಗಿ ರಾಜಕಾರಣ ಮಾಡುತ್ತಾರೆ.ನಮ್ಮ ಕಾರ್ಯಕರ್ತರು ಇದನ್ನು ವಿರೋಧಿಸಿ ಹೇಳಿಕೆ ನೀಡಿದರೆ ಅಭಿವೃದ್ದಿ ತಡೆಯುತ್ತಿದ್ದಾರೆ ಎಂದು ಬಿಂಬಿಸುವುದರಿಂದ ಶಾಸಕರ ಚಟುವಟಿಕೆಗೆ ನಾವು ಅಡ್ಡಿಪಡಿಸಿಲ್ಲ ಎಂದರು.

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವಂವ ರೈತರ ಹೋರಾಟದ ಕುರಿತು ಪ್ರತಿಕ್ರಿಯಿಸಿ ಗ್ರಾಮೀಣ ಬಾಗದ ರೈತರಿಗೆ ಅನ್ಯಾಯವಾಗಿದೆ.ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ.ನಮ್ಮ ಪೂರ್ಣ ಸಹಕಾರವಿದೆ.ಆದರೆ ಬೈಂದೂರು ಶಾಸಕರ ನಡೆಯನ್ನು ಸ್ಪಷ್ಟಪಡಿಸಲಿ.ಒಂದು ಕಡೆ ರೈತರಿಗೆ ಬೆಂಬಲ ಅನ್ನೋದು ಇನ್ನೊಂದು ಕಡೆ ಚುನಾವಣೆ ತಯಾರಿ ನಡೆಸುವುದನ್ನು ನಾವು ಮಾಡುತ್ತಿಲ್ಲ.ತೆರೆಮರೆಯಲ್ಲಿ ರೈತರ ಪ್ರತಿಭಟನೆ ಹತ್ತಿಕ್ಕುವ ರಾಜಕಾರಣ ಕೂಡ ನಾವು ಮಾಡುತ್ತಿಲ್ಲ.ಈ ವಿಚಾರದಲ್ಲಿ ನಾವು ರೈತರೊಂದಿಗೆ ಇದ್ದೇವೆ. ನಮ್ಮ ಪೂರ್ಣ ಬೆಂಬಲ ರೈತರಿಗೆ ಇದೆ ಎಂದರು.

ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಆಕ್ರಮ -ಸಕ್ರಮ ಸಮಿತಿ ಸದಸ್ಯರಾದ ಆನಂತ ಮೊವಾಡಿ,ಶ್ರೀನಿವಾಸ,ಸಾವಿತ್ರಿ ಅಳ್ವೆಗದ್ದೆ, ,ದಿನೇಶ ನಾಯ್ಕ ಹಳ್ಳಿಹೊಳೆ,ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ.ಪಡುವರಿ, ನಾಗರಾಜ ಗಾಣಿಗ ಬಂಕೇಶ್ವರ ಹಾಜರಿದ್ದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

one × 3 =