ಬೈಂದೂರು: ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ದೀಪಕ್ ಕುಮಾರ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಐದನೆ ದಿನಕ್ಕೆ ಕಾಲಿಟ್ಟಿದೆ. ಯಡ್ತರೆ ಗ್ರಾಮದ ಕಡ್ಕೆ ಭಾಗದ ರೈತರು ಶುಕ್ರವಾರದ ಪ್ರತಿಭಟನೆ ನೇತ್ರತ್ವ ವಹಿಸಿದ್ದರು.
ಗೊಂಡ ಸಮಾಜ ಭಾಂದವರು ಶಿವರಾತ್ರಿಯ ಹೋಳಿ ಕುಣಿತ ಹೌದಾರಾಯನ ಕುಣಿತ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.ಮಾತ್ರವಲ್ಲದೆ ನೇತ್ರತ್ವ ವಹಿಸಿ ಮಾತನಾಡಿದ ಪರಮಯ್ಯ ಗೊಂಡ ನಾವು ಸಾಂಪ್ರದಾಯಿಕ ಪದ್ದತಿಗೆ ಗೌರವ ನೀಡುವ ಜನಾಂಗ.ಶಿವರಾತ್ರಿ ಹೊರತು ಪಡಿಸಿದರೆ ಬೇರೆ ದಿನದಲ್ಲಿ ನಾವು ಕುಣಿಯುವುದಿಲ್ಲ.ನಾವು ನುಡಿಸುವ ವಾದನ ಶಿವನ ಕೈಯಲ್ಲಿರುವ ಡಮರು.ಅಂದು ಶಿವ ಮೊಳಗಿಸಿದಾಗ ಜಗತ್ತು ಅಲ್ಲೋಲ ಕಲ್ಲೊಲವಾಗಿತ್ತು.ಇಂದು ನಾವು ನೋವಿನಿಂದ ನುಡಿಸಿದ್ದೇವೆ ಸರಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಲಿದೆ ಎಂದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ ಜಿಲ್ಲಾ ರೈತ ಸಂಘದ ಮುಖಂಡರು ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಪ್ರತಿಯೊಂದು ವಿಷಯವು ಹೋರಾಟದಿಂದ ನಡೆಯಬೇಕಿದೆ.ಜೀವನವು ಒಂದು ಹೋರಾಟ ಅದರಲ್ಲೂ ಜಿಲ್ಲೆಯಲ್ಲಿ ರೈತರ ಬದುಕಿಗಾಗಿ ಹೋರಾಟ ಮಾಡಬೇಕಾಗಿರುವುದು ದುರಂತ.ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರಿಸಿರುವುದು ಹಳ್ಳಿಗಳಿಗೆ ಮಾಡಿದ ಅನ್ಯಾಯ.ರೈತರ ಹೋರಾಟ ಸ್ವಾಗತಾರ್ಹ.ಅವರಿಗೆ ಜಿಲ್ಲೆಯ ಪೂರ್ಣ ಬೆಂಬಲದ ಜೊತೆ ಜಿಲ್ಲಾಡಳಿತ ರೈತರ ಆಕ್ರೋಶ ಹೆಚ್ಚುವ ಮುನ್ನ ಪರಿಹಾರ ಕಾಣಿಸಬೇಕಾಗಿದೆ ಎಂದರು.
ಬೈಂದೂರು ತಾಲೂಕು ಧ.ಗ್ರಾ ಯೋಜನೆಯ ಭಜನಾ ಪರಿಷತ್ ಗೌರವಾಧ್ಯಕ್ಷ ಅಧ್ಯಕ್ಷ ರಘರಾಮ ಕೆ.ಪೂಜಾರಿ ಮಾತನಾಡಿ ಪ.ಪಂ ಸಮಸ್ಯೆ ಕೇವಲ ಬೈಂದೂರು ಭಾಗಕ್ಕೆ ಮಾತ್ರವಲ್ಲದೆ ಶಿರೂರಿಗು ಸಮಸ್ಯೆ ಇದೆ.ಆಲಂದೂರು, ಪಡುವರಿ ಭಾಗ ಗಡಿಯಾಗಿರುವ ಕಾರಣ ಶಿರೂರಿನಲ್ಲೂ ಪಟ್ಟಣ ಪಂಚಾಯತ್ ನಿಯಮ ಅಭಿವೃದ್ದಿಗೆ ತೊಡಕಾಗುತ್ತಿದೆ.ಹೀಗಾಗಿ ರೈತ ಸಂಘದ ಜೊತೆ ಶಿರೂರು ಗ್ರಾಮದವರು ಕೂಡ ಸೇರಿಕೊಳ್ಳುತ್ತೇವೆ ಎಂದರು.
ಬೈಂದೂರು ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ,ಉದಯ ಮಾಕೋಡಿ,ರವೀಂದ್ರ ಶೆಟ್ಟಿ ಪಟೇಲ್,ಸುಬ್ಬಣ್ಣ ಶೆಟ್ಟಿ ಕಿರಿಮಂಜೇಶ್ವರ,ರಾಜು ಪೂಜಾರಿ,ಗಣೇಶ ಪೂಜಾರಿ,ಮಣಿಕಂಠ ದೇವಾಡಿಗ ಸೇರಿದಂತೆ ವಿವಿದ ಪಕ್ಷದ ಸಂಘಟನೆಯ ಮುಖಂಡರು ಹಾಜರಿದ್ದರು.

ಅರುಣ ಕುಮಾರ ಶಿರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.