ಕತಾರ್; ಕೊಲ್ಲಿ ರಾಷ್ಟ್ರಗಳಲ್ಲೊಂದು ಪುಟ್ಟ ದೇಶ ಅದರ ರಾಜಧಾನಿಯಲ್ಲೊಂದು ಚಿಕ್ಕ ಜಾಗದಲ್ಲಿ ಒಳಾಂಗಣ ಮಳಿಗೆ. ಮಳಿಗೆಯ ಹೊರಗಿನ ಮಾರುಕಟ್ಟೆ ಪ್ರದೇಶದಲ್ಲಿ 36 ಡಿಗ್ರಿ ತಾಪಮಾನ, ಮಳಿಗೆಯ ಒಳಗೆ ಹವಾನಿಯಂತ್ರಿತ ವಾತಾವರಣ, ವಿಶೇಷವಾಗಿ ಹಣ್ಣಿನ ರಾಜನಿಗೆ ಈ ಸಿದ್ಧತೆ. ಎರಡನೇ ಬಾರಿ ಆಯೋಜಿಸುತ್ತಿರುವ ಮಾವಿನ ಹಾಂಬಾ ಪ್ರದರ್ಶನ ಇದಾಗಿದೆ.50ಕ್ಕೂ ಹೆಚ್ಚು ಅಂಗಡಿಗಳು, ಸುಮಾರು 25 ಮಾರಾಟಗಾರರು, ಪ್ರತಿದಿನಕ್ಕೆ ಸಾವಿರಾರು ಜನರು ಬಂದು ಆನಂದಿಸಿ, ಸ್ವಾದಿಸಿ, ಹೋಗುತ್ತಿರುವರು. ಇದೇ ಕತಾರಿನ ದೋಹದಲ್ಲಿರುವ ಸೂಕ್ ವಾಕಿಫ್ ನಲ್ಲಿ ನಡೆದ ಮಾವಿನ ಮೇಳ. ರಾಜಪುರಿ, ತೂತಪುರಿ, ಬಾದಾಮಿ, ನಾಟಿ, ಸಿಂಧೂರ ಇನ್ನೂ ಅನೇಕ ತಳಿಗಳ ಮಾವಿನ ಹಣ್ಣುಗಳ ಸುವಾಸನೆ ತುಂಬಿದ ಈ ಒಳಾಂಗಣ ಪ್ರದೇಶದಲ್ಲಿ, ಮಾವಿನ ಹಣ್ಣಿನ ರಸ, ಮಾವಿನಕಾಯಿ ಜೊತೆಗೆ ಉಪ್ಪು ಖಾರ, ಮಾವಿನ ಉಪ್ಪಿನಕಾಯಿ, ಮಾವಿನ ಐಸ್ ಕ್ರೀಮ್, ಮಾವಿನ ಫಲೂದ, ಮಾವಿನ ಲಸ್ಸಿ ಹೀಗೆ ವೈವಿಧ್ಯಮಯ ರುಚಿಕರ ರಸಭರಿತ ಮಾವಿನ ತಿಂಡಿ ಮತ್ತು ಪಾನಿಯಗಳು ಎಲ್ಲರ ಇಂದ್ರಿಯಗಳನ್ನು ಆಕರ್ಷಿಸಿತು.ಒಂದೆಡೆ ಸುಪ್ರಸಿದ್ಧ ವಾಣಿಜ್ಯ ಮಳಿಗೆಗಳ ಸಾಲಾಗಿ ಇದ್ದರೆ ಇನ್ನೊಂದೆಡೆ ಪ್ರಸಿದ್ಧ ಉಪಹಾರ ಕೇಂದ್ರಗಳ ಅಂಗಡಿ ಮುಂಗಟ್ಟುಗಳು ಇದ್ದವು, ಮತ್ತೊಂದೆಡೆ ನೇರ ಮಾರಾಟಗಾರರ (ಹೋಲ್ಸೇಲ್) ಮಳಿಗೆಗಳು ಇದ್ದವು. ಭಾರತ , ಕತಾರ್ , ಶ್ರೀಲಂಕಾ , ಬಾಂಗ್ಲಾದೇಶ, ಫಿಲಿಪಿನ್ಸ್ ಇನ್ನೂ ಹಲವು ದೇಶದ ಜನರು ಬಂದು ಈ ಮಾವಿನ ಮೇಳದಲ್ಲಿ ಹಣ್ಣಿನ ಯಾವುದಾದರೂ ಒಂದು ರುಚಿಯನ್ನು ಸೇವಿಸಿ ಹೋದರು.