ಬೈಂದೂರು: ಜಿಲ್ಲೆಯಲ್ಲಿ ರೈತರ ಹೆಸರಿನಲ್ಲಿ ಪಶ್ಚಿಮ ವಾಹಿನಿಯ ಯೋಜನೆಯ ದುರುಪಯೋಗ ಆಗುತ್ತಿದೆ ಖಾಸಗಿ ಕಂಪೆನಿಗಳ, ಗುತ್ತಿಗೆದಾರರ ಲಾಭಕ್ಕಾಗಿ ಇಲಾಖೆಯ ಅಧಿಕಾರಿಗಳು ಕೈಜೋಡಿಸಿದ್ದಾರೆ. ಸರಕಾರಕ್ಕೆ ತಿಳಿಸಿದ ಮೂಲ ನಕ್ಷೆಯನ್ನು ಬಿಟ್ಟು ರೈತರಿಗೆ ಮಾಹಿತಿ ನೀಡದೆ ಯೋಜನೆಗಳ ವರದಿಯನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಈ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನ ಮೆರವಣಿಗೆ ಮೇ 16ರಂದು ಬೆಳಗ್ಗೆ 10ಕ್ಕೆ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಆರಂಭಗೊಂಡು ತಾಲೂಕು ಕಚೇರಿವರೆಗೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ರೈತ ಸಂಘ ಕಂಬದಕೋಣೆ ವಲಯ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಮೇ 13ರಂದು ಉಪ್ಪುಂದದಲ್ಲಿ ನಡೆದ ಶ್ರೀ ಗುಡೇ ದೇವಸ್ಥಾನ ಏತ ನೀರಾವರಿ ಸಂತ್ರಸ್ತ ರೈತರ ಒಕ್ಕೂಟ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಂಬದಕೋಣೆ ಗ್ರಾ.ಪಂ. ವ್ಯಾಪ್ತಿಯ ಹಳಗೇರಿ ಕಟ್ಟಿನಬಳಿ ಅವೈಜ್ಞಾನಿಕವಾಗಿ ಏತ ನೀರಾವರಿ ಕಾಮಗಾರಿ ನಡೆಯುತ್ತಿದೆ. ಸರಕಾರದ ನಡಾವಳಿ ಹಾಗೂ ಯೋಜನಾ ವರದಿಗೆ ವಿರುದ್ಧವಾಗಿ ಜಾಕವೆಲ್ ನಿರ್ಮಿಸಿ ಕಟ್ಟಿನ ಒಳಗೆ ಸಂಗ್ರಹವಾದ ನೀರನ್ನು ಎತ್ತುವಂತಹ ಬಹುದೊಡ್ಡ ಲೋಪ ಗುತ್ತಿಗೆದಾರರು ಮಾಡಿದ್ದಾರೆ. ಅಧಿಕಾರಿಗಳು ಸರಕಾರ ಮತ್ತು ರೈತರ ಪರವಾಗಿ ಕೆಲಸ ಮಾಡದೆ ಗುತ್ತಿಗೆದಾರರ ಅಣತಿಯಂತೆ ನಡೆಯುತ್ತಿದ್ದು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಲು ಹೋರಾಟ ಮಾಡಲಾಗುತ್ತದೆ ಎಂದರು. ಒಂದು ವೇಳೆ ಈ ಯೋಜನೆ ನಡೆದಲ್ಲಿ ಅಚ್ಚು ಕಟ್ಟು ಭಾಗದ ರೈತರೆಲ್ಲ ಸಂತ್ರಸ್ತರಾಗುತ್ತಾರೆ. ಯೋಜನಾ ವರದಿಯಲ್ಲಿ ಜಾಕ್ವೆಲ್ ಬಿಂದು ಎನ್ನುವುದು ಕಟ್ಟಿನ ಕೆಳಭಾಗ ಅಂದರೆ ಸಮುದ್ರದ ಪಾಲಾಗುವ ಹೆಚ್ಚುವರಿ ನೀರಿನ ಬಳಿ ಇರಿಸುವುದು ಸ್ಪಷ್ಟವಾಗಿದೆ. ಆದರೆ ಅಧಿಕಾರಿಗಳು ಗುತ್ತಿಗೆದಾರರ ಜತೆ ಸೇರಿ ಸರಕಾರದ ನಡಾವಳಿಯನ್ನು ಕಡೆಗಣಿಸಿ ಜಾಕ್ವೆಲ್ ಬಿಂದುವನ್ನು ನೀರು ಶೇಖರಣೆಯಾಗುವ ಕಟ್ಟಿನ ಒಳಭಾಗ ಅಂದರೆ ರೈತರ ಹಕ್ಕಿನ ನೀರಿರುವ ಭಾಗದಲ್ಲಿ ಜಾಕ್ವೆಲ್ ಇರಿಸಿದ್ದಾರೆ. ಅಧಿಕಾರಿಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಕ್ರಮ ಕೈಗೊಂಡಿಲ್ಲ, ರೈತರ ಮೇಲೆ ಹಲ್ಲೆ ನಡೆಸಿದರು. ಸ್ಪಂದಿಸದ ಸಣ್ಣ ನೀರಾವರಿ ಸ್ಥಳೀಯ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ತನಿಖೆ ನಡೆಸಬೇಕು ಹಾಗೂ ಯೋಜನಾ ವರದಿಗೆ ವ್ಯತಿರಿಕ್ತವಾಗಿ ಹಳಗೇರಿ ಅಣೆಕಟ್ಟು ಪ್ರದೇಶದ ರೈತರಿಗೆ ಅನಾನುಕೂಲ ರೀತಿಯ ಯೋಜನೆಯನ್ನು ಮಾರ್ಪಡಿಸಿ ನಡೆಸಿರುವ ಕಾಮಗಾರಿಯ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲು ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಒಕ್ಕೂಟ ಅಧ್ಯಕ್ಷೆ ಜಯಂತಿ ಹೇರಂಜಾಲು, ಐತಾಳ್, ರಾಘವೇಂದ್ರ ಹೇರಂಜಾಲು ಉಪಸ್ಥಿತರಿದ್ದರು.
