ಬೈಂದೂರು: ಬ್ಲಾಕ್ ಕಾಂಗ್ರೆಸ್ ವಂಡ್ಸೆ ಮತ್ತು ಬೈಂದೂರು ಬ್ಲಾಕ್ ಕಾಂಗ್ರೆಸ್ ಇದರ ವತಿಯಿಂದ ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ದ ಜನಾಕ್ರೋಶ ಪ್ರತಿಭಟನೆ ಮತ್ತು ಜೈ ಭೀಮ,ಜೈ ಬಾಪು, ಜೈ ಸಂವಿಧಾನ. ಗಾಂಧಿ ಭಾರತ ಕಾರ್ಯಕ್ರಮ ಮಂಗಳವಾರ ಯಡ್ತರೆ ಜೆ.ಎನ್.ಆರ್ ಬಯಲು ರಂಗ ಮಂದಿರದಲ್ಲಿ ನಡೆಯಿತು.
ಬಂದರು,ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಮಾತನಾಡಿ ಬಿಜೆಪಿ ಆಡಳಿತದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಅಧಪತನವಾಗಿದೆ.ಬಡವರ ಬದುಕು ಬೀದಿಗೆ ಬಂದಿದೆ.ಸುಳ್ಳಿನ ಸರಮಾಲೆ ಹಾಗೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಬಿಜೆಪಿಯ ತಂತ್ರಗಾರಿಕೆಯಾಗಿದೆ.ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ.ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಜನರನ್ನು ತಲುಪಿದೆ. ಮೀನುಗಾರರ ಸೀಮೆಎಣ್ಣೆ, ಡಿಸೇಲ್ ಸಬ್ಸಿಡಿ, ಮೀನುಗಾರಿಕಾ ಮನೆ ಸಮಸ್ಯೆ ಬಗೆಹರಿಸಿದ್ದು ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ರಸ್ತೆ, ಸೇತುವೆ ಸಹಿತ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಕಾಂಗ್ರೆಸ್ ಸರಕಾರದಿಂದ ನಡೆಯುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ ಕರಾವಳಿಯಲ್ಲಿ ಮೀನುಗಾರರಿಗೆ ಪ್ರಯೋಜನವಾಗುವ ಗಂಗೊಳ್ಳಿ ಬ್ರೇಕ್ ವಾಟರ್, ಕೊಡೇರಿ ಪ್ರಾಜೆಕ್ಟ್ ಆರಂಭಿಸಿದ್ದು ಕಾಂಗ್ರೆಸ್. ಬಿಜೆಪಿಯವರು ಹೇಳುವ ಸುಳ್ಳು ಸಂಗತಿಗಳನ್ನು ಜನರಿಗೆ ಅರ್ಥೈಸಬೇಕಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುವರನ್ನು ಗುರುತಿಸಬೇಕು, ವೈಭವೀಕರಣ ಬೇಡ. ನಮ್ಮ ಮನೆಯ ಮಕ್ಕಳನ್ನು ಮೊದಲು ಜಾಗೃತಿ ಮಾಡಬೇಕು. ಬಡವರ ಮಕ್ಕಳನ್ನು ಮುಂದಕ್ಕೆ ತಳ್ಳುವ ಪ್ರವೃತ್ತಿಯಿಂದ ದೂರವಿರಬೇಕು. ಜನರು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಮಹಾತ್ಮ ಗಾಂಽಯವರ ಅಧ್ಯಕ್ಷತೆಯಲ್ಲಿ ಬೆಳಗಾಂನಲ್ಲಿ ನಡೆದ ಅಽವೇಶನಕ್ಕೆ ಬಹಳಷ್ಟು ಇತಿಹಾಸವಿದೆ. ಡಾ. ಬಿ.ಆರ್. ಅಂಬೇಡ್ಕರ್, ವಲ್ಲಬಾಯಿಪಟೇಲ್, ನೆಹರೂ ಮೊದಲಾದ ಮುಖಂಡರು ಭಾಗವಹಿಸಿದ್ದು ಮುಂದಿನ ಯುವಪೀಳಿಗೆಗೆ ಇದನ್ನು ನೆನಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆಗಳನ್ನು ಸುಳ್ಳು ಎಂದು ಬಿಂಬಿಸಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದರು. ಕಾಂಗ್ರೆಸ್ ಮಾಡಿದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮರೆಮಾಚಿದರು. ಕೇಂದ್ರದಲ್ಲಿ 10 ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿ ಸರಕಾರವು ವಚನ ಭ್ರಷ್ಟವಾಗಿದೆ. ಉದ್ಯೋಗ ಸೃಷ್ಟಿಯಿಲ್ಲದೆ ಜನ ವಲಸೆ ಹೋಗುವಂತಾಗಿದೆ. ಅವರ ಕೆಲವು ನೀತಿಯಿಂದಾಗಿ ಸಣ್ಣ ಕೈಗಾರಿಕೆಗಳು ಮುಚ್ಚಿದೆ. ರೈತರು ಕಂಗಾಲಾಗಿದ್ದಾರೆ. ಅಡುಗೆ ಅನಿಲ, ಇಂಧನ ದರ ಹೆಚ್ಚಿದೆ. ಮೋದಿ ಸರಕಾರದ ಬೆಲೆ ಏರಿಕೆಗೂ ಕಾಂಗ್ರೆಸ್ ಸರಕಾರದ ಜನಪರ ಯೋಜನೆಯನ್ನು ಜನರು ತುಲನೆ ಮಾಡಬೇಕಿದೆ. ಚಿನ್ನ, ಬೆಳ್ಳಿ, ಕಬ್ಬಿಣ, ಸಿಮೆಂಟ್ ಸಹಿತ ರಸಗೊಬ್ಬರದ ಬೆಲೆ ಏರಿಸಲಾಗಿದೆ. ಮತದಾರರು ಪ್ರಜ್ಞಾವಂತರಾಗಿ ಕರಾವಳಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಮತ್ತೆ ಅಕಾರಕ್ಕೆ ಬರುವಂತಾಗಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎ ಗಫೂರ್, ಐವನ್ ಡಿಸೋಜಾ, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ವಿನಯ ಕುಮಾರ್ ಸೊರಕೆ, ಪ್ರಸಾದರಾಜ್ ಕಾಂಚನ್, ಎಸ್. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಅರವಿಂದ ಪೂಜಾರಿ ನಾಡ,ದಿನೇಶ್, ಕೃಷ್ಣಯ್ಯ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಮುಖರ ಸಹಿತ, ಬ್ಲಾಕ್ ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಹಾಗೂ ಬೂತ್ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಬೈಂದೂರು ಗಾಂಧಿ ಮೈದಾನದಿಂದ ಬೃಹತ್ ಮೆರವಣಿಗೆ ನಡೆಸಲಾಯಿತು.ವಂಡ್ಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ಕಾರ್ಯಕ್ರಮ ನಿರೂಪಿಸಿದರು.ಕೆ.ಪಿ.ಸಿ.ಸಿ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ವಂದಿಸಿದರು.