ಬೈಂದೂರು; ರಾಜಕೀಯ ಜಂಜಾಟ ಗುತ್ತಿಗೆದಾರರ ಒಳರಾಜಕೀಯ.ನಾಯಕರುಗಳ ತೆರೆಮರೆಯ ಕಸರತ್ತು.ಒಳಗೊಳಗಿನ ಮಸಲತ್ತು ಪರ ವಿರೋದ ಹೊಂದಾಣಿಕೆ ಬೈಂದೂರು ಕ್ಷೇತ್ರದಲ್ಲಿ ಇದು ಇಂದು ನಿನ್ನೆಯದಲ್ಲ.ನಿರಂತರ ಇಂತಹ ಹತ್ತಾರು ಜಂಗಿ ಕುಸ್ತಿ ನಡೆಯುವುದು ಬಳಿಕ ಅದ್ಯಾವುದೋ ಮದ್ಯಸ್ಥಿಕೆಯಲ್ಲಿ ತಟಸ್ಥವಾಗುವುದು ಸಹಜ ಸಾಮಾನ್ಯ ವಾಗಿದೆ.ಆದರೆ ಹೆರಂಜಾಲು ಗುಡೆ ಎತ ನೀರಾವರಿ ಯೋಜನೆ ಕುರಿತು ನಿನ್ನೆ ನಡೆದ ವಿದ್ಯಮಾನ ಮಾತ್ರ ದೊಡ್ಡ ಹೋರಾಟದ ಸಿದ್ದತೆಯ ಮುನ್ಸೂಚನೆ ನೀಡುತ್ತಿದೆ ಮತ್ತು ಸರಕಾರ ,ಹಣಬಲದ ಪ್ರಭಾವದ ಮೂಲಕ ಕ್ಷೇತ್ರದಲ್ಲಿ ಹಿಂದಿನಿಂದಲೂ ನಡೆಯುತ್ತಿರುವ ಗುತ್ತಿಗೆದಾರರ ಲಾಭಿಗೆ ಜನರು ತಿರುಗಿ ಬಿದ್ದ ಮುನ್ಸೂಚನೆಯಾದರೆ ಇತ್ತೀಚೆಗೆ ನಡೆದ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೇಸ್ ನಾಯಕರುಗಳ ನಡುವಿನ ಬಂಡಾಯ ಬಿಜೆಪಿ ಹೊಂದಾಣಿಕೆ ಕೂಡ ಈ ಹೋರಾಟದ ಪರೋಕ್ಷ ಹಿನ್ನಲೆ ಹೊಂದಿದಂತಿದೆ.
ಜಟಾಪಟಿಗೆ ಕಾರಣಗಳೇನು: ಬೈಂದೂರು ತಾಲೂಕು ಕಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೇರಂಜಾಲು ಏತ ನೀರಾವರಿ ಯೋಜನೆ ವೈಫಲ್ಯ, ಸ್ಥಳೀಯ ರೈತರಿಗೆ ಆಗುತ್ತಿರುವ ತೊಂದರೆ ಕುರಿತು ಹೇರಂಜಾಲು ಶ್ರೀ ದುರ್ಗಾ ಗಣೇಶೋತ್ಸವ ವೇದಿಕೆಯಲ್ಲಿ ಮಾಹಿತಿ ಸಭೆ ಆಯೋಜಿಸಲಾಗಿತ್ತು.ಈ ಸಭೆಯಲ್ಲಿ ಎರಡು ತಂಡಗಳ ನಡುವೆ ತಳ್ಳಾಟ, ನೂಕಾಟ ನಡೆದು ಒಂದಿಷ್ಟ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆರಕ್ಷಕ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿ ಸಭೆ ಮುಂದುವರಿಯುವಂತೆ ಮಾಡಿದರು. ಏತ ನೀರಾವರಿ ಯೋಜನೆ ಇಲ್ಲಿ ಅವೈಜ್ಞಾನಿಕವಾಗಿ ಆಗುತ್ತಿದ್ದು ಸ್ಥಳೀಯ ರೈತರಿಗೆ ಇದರಿಂದ ತೊಂದರೆಯಾಗುತ್ತಿದೆ ಎನ್ನುವ ಕುರಿತು ಒಂದು ತಂಡ ವಾದ ಅಧಿಕಾರಿಗಳ ಮುಂದೆ ವಾದ ಮಂಡಿಸಿದರೆ ಇನ್ನೊಂದು ತಂಡ ಇದನ್ನು ವಿರೋಧಿಸಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ರೈತ ಮುಖಂಡರಾದ ಎಸ್.ಪ್ರಕಾಶ್ಚಂದ್ರ ಶೆಟ್ಟರ ಮೈಕ್ ಕಸಿದುಕೊಂಡು ಎಳೆದಾಡಿದ ಘಟನೆ ನಡೆಯಿತು. ಈ ಕಾಮಗಾರಿ ಹಾಗೂ ಜ್ಯಾಕ್‍ವೆಲ್ ಅವೈಜ್ಞಾನಿವಾಗಿದ್ದು, ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಗ್ರಾಮ ಪಂಚಾಯತ್‍ಗೆ 15 ದಿನಗಳ ಹಿಂದೆ ಮಾಹಿತಿ ನೀಡಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಈ ಬಗ್ಗೆ ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಷ್ಟು ದೊಡ್ಡ ಯೋಜನೆ ಆಗುತ್ತಿದ್ದರೂ ಕೂಡಾ ಎಲ್ಲಿಯೂ ಕೂಡಾ ಒಂದು ಬೋರ್ಡ್ ಸಹ ಹಾಕಿಲ್ಲ. ಅಣೆಕಟ್ಟುವಿನ ನೀರಿನ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈಗಾಗಲೇ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡಿಲ್ಲ. 1 ಸಾವಿರ ಎಕ್ರೆ ಹಿಂಗಾರು ಹಂಗಾಮಿ ಭತ್ತ ಬೇಸಾಯ ಮಾಡುವವರು ಇಲ್ಲಿ ಇದ್ದಾರೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ, ಸರ್ವೇ ಆಗಿಲ್ಲ, ನೀರು ನಿರ್ವಹಣೆ ಸಮಿತಿ ರಚನೆ ಮಾಡಿಲ್ಲ, ನೀರು ತುಂಬಿದಾಗ ನದಿ ಬದುಗಳನ್ನು ಮಣ್ಣಿನ ಕಟ್ಟು ಕಟ್ಟಿ ಏರಿಸುವುದಾಗಿ ಹೇಳುತ್ತಾರೆ. ನೀರು ಮೇಲ್ಭಾಗದಲ್ಲಿ ತುಂಬಿರುವಾಗ ತಗ್ಗು ಪ್ರದೇಶದಲ್ಲಿರುವ ಗದ್ದೆಗೆ ನೀರಿನ ಉಜುರು ಬರುತ್ತದೆ. ಇದು ಸಾಮಾನ್ಯ ಜನರಿಗೂ ಗೊತ್ತಿದೆ. ಅಧಿಕಾರಿಗಳು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು.
ಈ ಸಂದರ್ಭ ಆಗಮಿಸಿದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಸುಮಾರು 70 ಕೋಟಿ ರೂಪಾಯಿಯ ದೊಡ್ಡ ಯೋಜನೆ ಈ ಗ್ರಾಮಕ್ಕೆ ಬಂದಿದೆ. ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಸರಕಾರದ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಟುಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಗ್ರಾಮಸ್ಥರು ತಮ್ಮ ಹಕ್ಕು ಕೇಳುತ್ತಾರೆ, ಅಧಿಕಾರಿಗಳು ವಾದ ಮಾಡದೆ ಅವರಿಗೆ ಅನುಕೂಲವಾಗುವಂತೆ, ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.ನಾವೀಗ ಸಾಕಷ್ಟು ದೂರ ಬಂದಾಗಿದೆ. ಇಷ್ಟರೊಳಗೆ ನಮ್ಮ ಸಮಸ್ಯೆಯನ್ನು ತಿಳಿಸಬೇಕಾಗಿತ್ತು. ಈಗಲೂ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಯನ್ನು ಗಮನಿಸಬೇಕು. ನಾಗರಿಕರ ಸಮಿತಿ ರಚನೆ ಮಾಡಬೇಕು, ರೈತರ ಸಭೆ ಕರೆಯಬೇಕು ಎಂದು ಹೇಳಿದ ಅವರು, ಇಲ್ಲಿ ಆಗಬೇಕಾದ ವಿಷಯದ ಬಗ್ಗೆ ಗ್ರಾಮದ ಪ್ರಮುಖರು, ಅಧಿಕಾರಿಗಳ ಸಭೆ ನಡೆಸಿ, ತೀರ್ಮಾನ ತಗೆದುಕೊಳ್ಳೊಣ ಎಂದರು.











ಈ ಸಂದರ್ಭದಲ್ಲಿ ಹಲವಾರು ರೈತರು ಯೋಜನೆಯಿಂದ ನೀರು ಕೃಷಿಭೂಮಿಗೆ ನುಗ್ಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಸೂಕ್ತ ಪರಿಹಾರ ಒದಗಿಸಬೇಕು, ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪುನೀತ್ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಸಭೆಯಲ್ಲಿ ಕಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಅಭಿವೃದ್ಧಿ ಅಧಿಕಾರಿಗಳು, ರೈತ ಮುಖಂಡರು, ಇಲಾಖೆಯ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.