ಬೈಂದೂರು: ಕಳೆದ ಹತ್ತು ವರ್ಷಗಳಿಂದ ಹಲವು ಬಾರಿ ಮನವಿ ನೀಡಿದರು ಕೂಡ ಮೀನುಗಾರಿಕೆ ಇಲಾಖೆ ನಿಷೇಧಿಸಿ ಬುಲ್‌ಟ್ರಾಲ್ ಮತ್ತು ಬೆಳಕು ಮೀನುಗಾರಿಕೆಯನ್ನು ನಿಯಂತ್ರಿಸದ ಪರಿಣಾಮ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬದುಕು ಬೀದಿಗೆ ಬರುವಂತಾಗಿದೆ.ಹೀಗಾಗಿ ಬೆಳಕು ಮೀನುಗಾರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಒಕ್ಕೂಟ ಮರವಂತೆ ಬೀಚ್‌ನಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದರು.
ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ ಉಪ್ಪುಂದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಕಾನೂನಿನಲ್ಲಿ ಸ್ವಲ್ಪ ನಿಷೇಧದ ಉಲ್ಲೇಖವಿದೆ.ಆದರೆ ಕೈಗೊಳ್ಳಬೇಕಾದ ಅಧಿಕಾರಿಗಳು ಜಾಣ ಮೌನದ ಮೂಲಕ ಪರೋಕ್ಷವಾಗಿ ಬೆಳಕು ಮೀನುಗಾರಿಕೆಗೆ ಸಹಕರಿಸುತ್ತಿದ್ದಾರೆ.ಈಗಾಗಲೇ ಹಲವು ಬಾರಿ ಮನವಿ ನೀಡಿದರು ಸಹ ಗಂಭೀರವಾಗಿ ಪರಿಗಣಿಸಿಲ್ಲ.ಬುಲ್‌ಟ್ರಾಲ್, ಬೆಳಕು ಮೀನುಗಾರಿಕೆ ನಿಯಂತ್ರಿಸದಿದ್ದಲ್ಲಿ ಮುಂದೊಂದು ದಿನ ಮತ್ಸ್ಯಸಂತತಿ ನಾಶವಾಗಿ ಮತ್ಸ್ಯಕ್ಷಾಮ ಉಂಟಾಗುತ್ತದೆ.ಅಧಿಕಾರಿಗಳು ಕೇವಲ ಸಬೂಬು ಹೇಳುವುದು ನಮಗೆ ಬೇಕಿಲ್ಲ.ಹತ್ತು ದಿನಗಳ ಒಳಗೆ ಸಂಪೂರ್ಣ ನಿಯಂತ್ರಿಸದಿದ್ದರೆ ಸರಕಾರಿ ಅಧಿಕಾರಿಗಳ ಕಛೇರಿ ಎದುರು ಅರ್ನಿಧಿಷ್ಟಾವಧಿ ಮುಷ್ಕರ ಮಾಡಬೇಕಾಗುತ್ತದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಪ್ರಕೃತಿಯನ್ನು ಉಳಿಸಲು ಕಾನೂನು ಜಾರಿ ಆಗುವಂತದ್ದು.ಅದನ್ನು ಪಾಲಿಸುವ ಮೂಲಕ ಮತ್ಸ್ಯ ಸಂತತಿ ಕಾಪಾಡಿಕೊಳ್ಳಬೇಕಾಗಿದೆ.ಮೀನುಗಾರರು ಬೀದಿಗಿಳಿಯುವ ಅವಕಾಶ ಬರಬಾರದಿತ್ತು.ಆದರೆ ಹೋರಾಟದಿಂದ ಮಾತ್ರ ನಮ್ಮ ಹಕ್ಕು ಮತ್ತು ನ್ಯಾಯ ಪಡೆಯಲು ಸಾಧ್ಯ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ಮೀನುಗಾರರ ಸಮಸ್ಯೆ ಕುರಿತಂತೆ ನಿರಂತರ ಅವರ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ.ಬೆಳಕು ಮೀನುಗಾರಿಕೆ ಸಮಸ್ಯೆ ಕುರಿತು ಈಗಾಗಲೇ ಮೀನುಗಾರಿಕೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಾಂಪ್ರದಾಯಿಕ ಮೀನುಗಾರಿಕೆಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳುತ್ತೇನೆ ಎಂದರು.








ಬಳಿಕ ಸ್ವಲ್ಪ ಹೊತ್ತು ರಸ್ತೆ ತಡೆದು ಮೀನುಗಾರರ ಒಕ್ಕೂಟದ ಪರವಾಗಿ ಮೀನುಗಾರಿಕಾ ಅಧಿಕಾರಿಗಳಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಅಂಜನಾ ದೇವಿ,ವಿವೇಕ್,ದ.ಕ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು,ರಾಜ್ಯ ಒಕ್ಕೂಟದ ಗೌರವ ಸಲಹೆಗಾರ ಮದನ್ ಕುಮಾರ್ ಉಪ್ಪುಂದ,ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯಶವಂತ್,ನವೀನ್‌ಚಂದ್ರ ಉಪ್ಪುಂದ,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ವೆಂಕಟರಮಣ ಖಾರ್ವಿ,ರಾಜ್ಯ ಒಕ್ಕೂಟದ ಉಪಾಧ್ಯಕ್ಷ ನಾಗೇಶ ಖಾರ್ವಿ,ಉತ್ತರ ಕನ್ನಡ ಮೀನುಗಾರ ಮುಖಂಡ ಸೋಮನಾಥ ಮೊಗೇರ್,ತಿಮ್ಮಪ್ಪ ಖಾರ್ವಿ,ವಸಂತ ಸುವರ್ಣ,ಸುಧಾಕರ,ಅಶ್ವಥ್ ಕಾಂಚನ್,ಕೃಷ್ಣ ಮುರುಡೇಶ್ವರ,ಬಲೀಂದ್ರ ಮೊಗೇರ್,ಅಜೀಜ್ ಗಂಗೊಳ್ಳಿ,ಸುರೇಶ ಮರವಂತೆ,ರಾಮ ಖಾರ್ವಿ ಬಬ್ರಿ ಉಪ್ಪುಂದ,ಪ್ರವೀಣ್,ಮಹೇಶ್ ನಾವುಂದ,ಹಾಗೂ ಮೀನುಗಾರ ವಿವಿಧ ಮುಖಂಡರು ಹಾಜರಿದ್ದರು.






ವರದಿ/ಚಿತ್ರ: ಗಿರಿ ಶಿರೂರು