ಬೈಂದೂರು: ಕಳೆದ ಆರೇಳು ತಿಂಗಳುಗಳಿಂದ ತೆರೆಮರೆಯಲ್ಲಿದ್ದ ಬೈಂದೂರು ರಾಜಕೀಯ ಮೇಲಾಟ ಇಂದು ಬೀದಿಗೆ ಬಂದಿದೆ.ರಾಜಕೀಯ ಜಂಜಾಟದಿಂದ ಜಟಿಲವಾಗಿದ್ದ ಕಲ್ಲುಕೋರೆ ಪುನರಾರಂಭದ ಸಮಸ್ಯೆ ಇನ್ನಷ್ಟು ಗೊಂದಲ ಉಂಟು ಮಾಡಿದೆ.ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ಬಣಗಳ ನಡುವೆ ಜಾಥಾದಲ್ಲಿ ಮಾತಿನ ಚಕಮಕಿ ನಡೆದಿದೆ.ಬಳಿಕ ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ಶಾಸಕರ ನೇತ್ರತ್ವದಲ್ಲಿ ಪ್ರತಿಭಟನೆ ನಡೆದರೆ ಮಾಜಿ ಶಾಸಕರ ನೇತ್ರತ್ವದಲ್ಲಿ ಮನವಿ ನೀಡಿದ ಅಪರೂಪದ ಪ್ರತಿಭಟನಾ ಸಂಗಮಕ್ಕೆ ಬೈಂದೂರು ಸಾಕ್ಷಿಯಾಗಿದೆ.

ಗೊಂದಲಕ್ಕೆ ಕಾರಣಗಳೇನು: ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಜಿಲ್ಲಾಡಳಿತ ಮತ್ತು ಆರಕ್ಷಕ ಇಲಾಖೆ ಕೆಂಪುಕಲ್ಲು ಗಣಿಗಾರಿಕೆಯನ್ನು ನಿಷೇಽಸಿತ್ತು.ಇದರಿಂದಾಗಿ ಬೈಂದೂರು ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ತಟಸ್ಥಗೊಂಡಿತ್ತು.ಈ ಕುರಿತು ಇತ್ತೀಚೆಗಷ್ಟೆ  ಕೆ.ಡಿ.ಪಿ ಸಭೆಯಲ್ಲಿ ಶಾಸಕರು ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದ್ದು ಮಾಜಿ ಶಾಸಕರು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು.ಬೆಂಗಳೂರಿನಲ್ಲಿ ಶಾಸಕರ ನಿಯೋಗದಲ್ಲಿ ಉಸ್ತುವಾರಿ ಸಚಿವರು, ಮಾಜಿ ಶಾಸಕರು ಮುಖ್ಯಮಂತ್ರಿ ಸಭೆ ನಿಗದಿಮಾಡಿ ಬಳಿಕ ಮುಂದೂಡಲಾಗಿತ್ತು.ಇದರ ನಡುವೆ ಬೈಂದೂರು ಕಲ್ಲುಕೋರೆ ಮಾಲಕರು ಮತ್ತು ಲಾರಿ ಮಾಲಕರ ಸಂಘದವರು ವಿವಿಧ ರಾಜಕೀಯ ಮುಖಂಡರ ನೇತ್ರತ್ವದಲ್ಲಿ ಸಭೆ ನಡೆಸಿ ಸರಕಾರದ ಗಮನ ಸೆಳೆಯುವ ತೀರ್ಮಾನ ಕೈಗೊಂಡು ಶನಿವಾರ ನಿಗಧಿಪಡಿಸಲಾಗಿತ್ತು.

ಪ್ರತಿಭಟನೆ ಮತ್ತು ಮನವಿ ಜಾಥಾ ಗೊಂದಲ: ಕೆ.ಡಿ.ಪಿ ಸಭೆಯಲ್ಲಿ ಒಂದು ವಾರದಲ್ಲಿ ಕಲ್ಲು ಕೋರೆ ಆರಂಭವಾಗದಿದ್ದರೆ ಡಿ.07 ರಂದು ಪ್ರತಿಭಟನೆ ನಡೆಸುತ್ತೇವೆ ಎಂದು  ವಾರದ ಹಿಂದೆಯೆ  ಹೇಳಿದ್ದೆ ಹೀಗಾಗಿ ಜಿಲ್ಲಾಡಳಿತ ಮತ್ತು ಸರಕಾರದ ವಿರುದ್ದ ಪ್ರತಿಭಟನೆಯಿಂದ ಮಾತ್ರ ನ್ಯಾಯ ಪಡೆಯಲು ಸಾದ್ಯ ಎಂದು ಶಾಸಕ ಗುರುರಾಜ ಗಂಟಿಹೊಳೆ ಬಳಗದವರ ವಾದವಾದರೆ, ಕಲ್ಲುಕೋರೆ ಆರಂಭವಾಗಬೇಕಾದರೆ ಎರಡು ಪಕ್ಷದವರು ಒಮ್ಮತಬೇಕು ಹೀಗಾಗಿ ಪೂರ್ವಭಾವಿ ಸಭೆಯಲ್ಲಿ ತಿಳಿಸಿದಂತೆ ಕೇವಲ ಮನವಿ ನೀಡುವ ಮೂಲಕ ಸರಕಾರದ ಗಮನ ಸೆಳೆದು ಅಧಿವೇಶನದಲ್ಲಿ ತೀರ್ಮಾನವಾಗದಿದ್ದರೆ ಬಳಿಕ ಪ್ರತಿಭಟನೆ ಮಾಡಬಹುವುದು ಮತ್ತು ಸ್ವತಃ ನಾನೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎನ್ನುವುದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಬಣದವರ ವಾದ.ಬೈಂದೂರು ಅಂಡರ್ ಪಾಸ್‌ನಿಂದ ಒಗ್ಗಟ್ಟಿನಲ್ಲಿ ಹೋದ ಬ್ರಹತ್ ಜಾಥಾ ಬೈಂದೂರು ಗಾಂಧಿ ಮೈದಾನದ ಬಳಿ ಬರುತ್ತಿದ್ದಂತೆ  ಈ ವಿಚಾರಕ್ಕೆ ಪರಸ್ಪರ ಮಾತಿನ ಚಕಮಕಿ ನಡೆದು ಬಳಿಕ ಎರಡು ಪ್ರತ್ಯೇಕ ಬಣಗಳಾಗಿ ತಾಲೂಕು ಕಛೇರಿಗೆ ತೆರಳಿದರು.

ಡ್ರಾಮ ಸಾಕು,ಹತ್ತು ದಿನದಲ್ಲಿ ಕಲ್ಲುಕೋರೆ ಆರಂಭವಾಗದಿದ್ದರೆ ಜಿಲ್ಲೆಯಲ್ಲಿ ಇದುವರೆಗೆ ನಡೆಯದಿರುವ ಬ್ರಹತ್ ಪ್ರತಿಭಟನೆ ನಡೆಯುತ್ತದೆ:ಶಾಸಕ ಗುರುರಾಜ ಗಂಟಿಹೊಳೆ.

ಕಳೆದ ಮೂರು ತಿಂಗಳಿಂದ ಇಂದು ಆರಂಭವಾಗುತ್ತದೆ ನಾಳೆ ಆರಂಭವಾಗುತ್ತದೆ ಎಂದು ಕಾಯುತ್ತಿರುವ ಬಡ ಕೂಲಿ ಕಾರ್ಮಿಕರ ಬದುಕು ಇಂದು ಬೀದಿಗೆ ಬಂದಿದೆ.ಉಡುಪಿ ಜಿಲ್ಲೆಯಲ್ಲಿ ಯಾವ ವ್ಯವಹಾರಗಳಿಗೆ ಆಸ್ಪದ ನೀಡದೆ ಅಧಿಕಾರಿಗಳ ಮೂಲಕ ಬಡವರನ್ನು ಸತಾಯಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.ಮನವಿ ನೀಡುವುದು, ಗಮನಕ್ಕೆ ತರುವುದು ಇವೆಲ್ಲವೂ ಕೂಡ ಮಾಡಿ ಆಗಿದೆ.ಕೇವಲ ಸರಕಾರ ಒಂದು ಆದೇಶ ನೀಡಿದರೆ ಇಷ್ಟರವರೆಗೆ ಕೆಂಪುಕಲ್ಲು ಗಣಿಗಾರಿಕೆ ಆರಂಭವಾಗುತ್ತಿತ್ತು.ಆದರೆ ಉಸ್ತುವಾರಿ ಸಚಿವರಿಗೆ ಕೆ.ಡಿ.ಪಿ ಸಭೆಯವರೆಗೂ ಈ ಸಮಸ್ಯೆ ಗಮನದಲ್ಲಿರಲಿಲ್ಲ.ನಾವು ಸರಕಾರಿ ಜಾಗದಲ್ಲಿ ಅಥವಾ ಕಾನೂನು ಹೊರತುಪಡಿಸಿ ಅನುಮತಿ ಕೇಳುತ್ತಿಲ್ಲ.ಬದಲಾಗಿ ಕೃಷಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಹಕರಿಸುವ ಕೋರಿಕೆಯಾಗಿದೆ.ಹತ್ತು ದಿನಗಳ ಹಿಂದೆಯೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದೆ.ಜನಸಾಮಾನ್ಯರಿಗೆ ನಮ್ಮ ರಾಜಕೀಯ ಬೇಕಿಲ್ಲ.ಅವರಿಗೆ ಬೇಕಿರುವುದು ನ್ಯಾಯ.ಹೀಗಾಗಿ ಈ ಡ್ರಾಮ, ನಾಟಕ ಸಾಕು ಮುಂದಿನ ಹತ್ತು ದಿನದಲ್ಲಿ ಜಿಲ್ಲಾಡಳಿತ ಕಲ್ಲುಕೋರೆ ಪುನರಾರಂಭಿಸಲು ಕ್ರಮಕೈಗೊಳ್ಳದಿದ್ದರೆ ಸಾರ್ವಜನಿಕರ ಸಹಕಾರದಲ್ಲಿ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ನಡೆಯದಿರದಂತಹ ಬ್ರಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಡಿ.15ಕ್ಕೆ ನಿರ್ಣಯ ದೊರೆಯಲಿದೆ.ಕಲ್ಲುಕೋರೆ ಸಮಸ್ಯೆ ಶೀಘ್ರ ಬಗೆಹರಿಯಲಿದೆ:ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ

ಉಡುಪಿ ಜಿಲ್ಲೆಯಲ್ಲಿ ಕಾನೂನಿನ ತೊಡಕು ಇರುವ ಕಾರಣ ಕಲ್ಲುಕೋರೆ ಆರಂಭಕ್ಕೆ ಅವಕಾಶ ದೊರೆಯುತ್ತಿಲ್ಲ.ಈ ಕುರಿತು ಉಸ್ತುವಾರಿ, ಸಚಿವರು,ಉಪಮುಖ್ಯಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಜೊತೆ ಇಲ್ಲಿನ ಜನರ ಸಮಸ್ಯೆ ಕುರಿತು ಚರ್ಚಿಸಿ ಗಮನಕ್ಕೆ ತಂದಿದ್ದೇನೆ.ಬೆಳಗಾಂ ಅಧಿವೇಶನದಲ್ಲಿ 15ನೇ ತಾರೀಖು ಕಾನೂನು ತಿದ್ದುಪಡಿ ಅಥವಾ ವಿಶೇಷ ಆದೇಶ ದೊರೆಯುವ ಭರವಸೆ ಇದೆ.ಒಂದೊಮ್ಮೆ 15ನೇ ತಾರೀಖಿನಂದು ಸರಕಾರ ನಿರ್ಣಯ ತೆಗೆದುಕೊಳ್ಳದಿದ್ದರೆ ಕಲ್ಲುಕೋರೆ ಮಾಲಕರ ಜೊತೆ ನಾನು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ.ಯಾವುದೇ ಕಾರಣಕ್ಕೂ ಬಡವರಿಗೆ ಅನ್ಯಾಯವಾಗಲಿಕ್ಕೆ ಸಹಿಸೋದಿಲ್ಲ.ಶೀಘ್ರ ಇತ್ಯರ್ಥವಾಗುವ ಭರವಸೆ ಇದೆ ಎಂದರು.

ಲಾಸ್ಟ್ ಪಂಚ್

ಬೈಂದೂರಿನ ಇಂದಿನ ಕಲ್ಲುಕೋರೆ ಪ್ರತಿಭಟನೆ ಜಾಥಾ ಹಲವು ವಿಷಯಕ್ಕೆ ಸುದ್ದಿಯಾಗಿದೆ.ಕಲ್ಲುಕೋರೆ ಮಾಲಿಕರು ಮತ್ತು ಲಾರಿ ಮಾಲಕರ ಸಂಘದ ಸಮನ್ವಯದ ಕೊರತೆ ಎದ್ದು ಕಂಡರೆ ರಾಜಕೀಯ ಭಿನ್ನಾಭಿಪ್ರಾಯಗಳು ಬುಗಿಲೆದ್ದಿತ್ತು.ಮಾಜಿ ಶಾಸಕರು ಮತ್ತು ಹಾಲಿ ಶಾಸಕರ ನಡುವಿನ ರಾಜಕೀಯ ಜಿದ್ದಾಜಿದ್ದಿ ಪರೋಕ್ಷವಾಗಿ ಎದ್ದು ಕಂಡಿತ್ತು.ಇದರ ನಡುವೆ ಬಿಜೆಪಿಯ ಕ್ಷೇತ್ರಾಧ್ಯಕ್ಷರು ಒಂದು ಕಡೆಯಾದರೆ ಶಾಸಕರು ಹಾಗೂ ಕಲ್ಲು ಕೋರೆ ಮತ್ತು ಲಾರಿ ಮಾಲಕರ ಸಂಘದ ಅಧ್ಯಕ್ಷರು ಇನ್ನೊಂದೆಡೆ ಈ ಎಲ್ಲಾ ಗೊಂದಲಗಳ ನಡುವೆ ಈ ವರ್ಷವೂ ಕೆಂಪು ಕಲ್ಲು ಕೋರೆ ಆರಂಭವಾಗುವುದೆ ಎನ್ನುವುದು ಸಾರ್ವಜನಿಕರ ಆತಂಕವಾಗಿದೆ.

ವರದಿ/ಚಿತ್ರ; ಗಿರಿ ಶಿರೂರು

Leave a Reply

Your email address will not be published. Required fields are marked *

eighteen − 4 =