ಬೈಂದೂರು: ರಾಜ್ಯದ  ಎಲ್ಲಾ ಜಿಲ್ಲೆಗಳಿಗೆ ಒಂದು  ಕಾನೂನು ಆದರೆ ಉಡುಪಿ ಜಿಲ್ಲೆಗೆ ಮಾತ್ರ ಪ್ರತ್ಯೇಕ ಕಾನೂನು ಎಂಬಂತಿದೆ.ರಾಜಕೀಯ ಚದುರಂಗದಾಟ ಅಧಿಕಾರಿಗಳ ವಾಸ್ತವತೆ ಅರಿವಿನ ಕೊರತೆ ನಡುವೆ ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ವರ್ಷದಿಂದ ಮನೆ ನಿರ್ಮಾಣದ ಕನಸು ಕೈಬಿಡುವಂತಹ ಪರಿಸ್ಥಿತಿ ಬಂದಿದೆ. ಹತ್ತಾರು ಜಂಜಾಟದಲ್ಲಿ ಕಟ್ಟಡ ಕೂಲಿ ಕಾರ್ಮಿಕರು ಮಾತ್ರ ಕೆಲಸವಿಲ್ಲದೆ ಬಡವರ ಬದುಕು ಬರಡಾಗುವಂತಾಗಿದೆ.

ಎನಿದು ಕಲ್ಲು ,ಮರಳಿನ ಸಮಸ್ಯೆ; ಉಡುಪಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೆಂಪು ಕಲ್ಲು ಗಣಿಗಾರಿಕೆ ಹಾಗೂ ಮರಳು ಸಾಗಾಟ ನಿರಂತರವಾಗಿ ನಡೆಯುತ್ತಿತ್ತು.ಮರಳು ಸಾಗಾಟದ ಪೈಪೋಟಿಯಿಂದಾಗಿ ಗಣಿ ಇಲಾಖೆ, ಪರಿಸರ ಇಲಾಖೆ ಹಸಿರು ಪೀಠದ ಸಮಸ್ಯೆ ಬಳಿಕ ಕಳೆದೆರಡು ವರ್ಷದಿಂದ ಪರವಾನಗೆ ಕ್ರಮ ಕಣ್ಣು ಮುಚ್ಚಾಲೆಯಾದಂತಾಗಿದೆ.ಕಳೆದ ತಿಂಗಳು ಟೆಂಡರ್ ಬಳಿಕ ಮರಳು ಆರಂಭವಾಗಿದೆ.ಹನ್ನೆರಡರಿಂದ ಹದಿಮೂರು ಸಾವಿರಕ್ಕೆ ದೊರೆಯುತ್ತಿದ್ದ ಮರಳು ಹದಿನೆಂಟು ಸಾವಿರ ರೂಪಾಯಿಯಾಗಿದೆ.ಆನ್‌ಲೈನ್ ಬುಕ್ಕಿಂಗ್ ಆದರೂ ಕೂಡ ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಗೋಲ್‌ಮಾಲ್ ನಿರಂತರ ನಡೆಯುತ್ತಿದೆ.ಕಸಕಡ್ಡಿ ತುಂಬಿರುವ ಮರಳು ಕೆಲವರಿಗೆ ಹಗಲು ರಾತ್ರಿ ಪೂರೈಕೆಯಾದರೆ ಮಾಮೂಲು ನೀಡದವರಿಗೆ ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಸರ್ವರ್ ಬ್ಯುಸಿ ಅಂತ ಕಾಣುತ್ತಿದೆ.ಒಟ್ಟಾರೆ ವ್ಯವಸ್ಥಿತ ಹೊಂದಾಣಿಕೆ ನಡೆದಿದೆ.ನಿತ್ಯ  150 ಲಾರಿಗಳು ಬೇಡಿಕೆಯಿದ್ದರೆ ದಿನಕ್ಕೆ 30 ಲೋಡ್ ಮಾತ್ರ ಪೂರೈಕೆಯಾಗುತ್ತಿದೆ ಎನ್ನುವುದು ನಾವು ನಂಬಬೇಕಾದ ಸರಕಾರದ ಲೆಕ್ಕ. ಹೀಗಾಗಿ ನಿತ್ಯ ಮರಳು ಸಾಗಾಟ ಗೊಂದಲಮಯವಾಗಿದೆ.

ಕೆಂಪು ಕಲ್ಲಿಗೆ ಕಾನೂನು ಸಮಸ್ಯೆಗಳೇನು: ಉಡುಪಿ ಜಿಲ್ಲೆಯಲ್ಲಿ ತುಂಡು ಭೂಮಿ ಹಿಡುವಳಿದಾರರು ಅಧಿಕ ಇರುವ ಕಾರಣ ಕಲ್ಲು ಗಣಿಗಾರಿಕೆಗೆ ಸರಕಾರ 3 ಎ ನಿಯಮದಡಿ ತಾತ್ಕಾಲಿಕ ಅನುಮತಿ ನೀಡಿದೆ.ಇದರ ಪ್ರಕಾರ ರೈತರು ಕೃಷಿ ಭೂಮಿ ಸಮತಟ್ಟು ಮಾಡುವ ಉದ್ದೇಶದಿಂದ ಕಲ್ಲು ತೆಗೆಯಲು ಅನುಮತಿ ಪಡೆಯಬಹುದಿತ್ತು.ಈ ನಿಯಮದ ಪ್ರಕಾರ ಬಿಜಾಪುರದಲ್ಲಿ ಖಾಸಗಿ ವ್ಯಕ್ತಿ ದೊಡ್ಡ ಪ್ರಮಾಣದಲ್ಲಿ ಶಿಲೆಕಲ್ಲು ಕೋರೆ ನಡೆಸಿ ನಿಯಮ ದುರ್ಬಳಕೆಯಾದ ಬಗ್ಗೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಅನುಮತಿ ಹಿಂಪಡೆದಿತ್ತು.ಉಡುಪಿ ಜಿಲ್ಲೆಯಲ್ಲಿ 3 ಎ ಅನುಮತಿ ಪಡೆದು ನಿಯಮಗಳಿಗೆ ಹೊರತಾಗಿ ದೊಡ್ಡ ಕೋರೆ ನಿರ್ಮಾಣವಾಗಿರುವ ಕುರಿತು ಜಿಲ್ಲಾಧಿಕಾರಿ ಮತ್ತು ಗಣಿಗಾರಿಕಾ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ದೂರು ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿದೆ.ಮಂಗಳೂರಿನ ನಿಡ್ಡೋಡಿಯಲ್ಲಿ ಇಂದು ಲೋಕಾಯುಕ್ತ ಪೊಲೀಸರು ಪರವಾನಗೆ ಇಲ್ಲದ ಕೆಂಪು ಕಲ್ಲು ಕೋರೆಗಳ ಮೇಲೆ ದಾಳಿ ಮಾಡಿದ್ದಾರೆ.ಪ್ರಸ್ತುತ 3 (ಎಬಿ) ನಿಯಮದಲ್ಲಿ ಪರವಾನಗೆ ಪಡೆಯಲು ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು ಕೂಡ ಕೆಂಪುಕಲ್ಲು ಕೋರೆಗಳಿಗೆ ಇದರಲ್ಲಿ ಅವಕಾಶವಿಲ್ಲ.

ರಾಜಕೀಯ ಬಣ್ಣ: ಉಡುಪಿ ಜಿಲ್ಲೆಯಲ್ಲಿ ಬಹಳ ಹಿಂದಿನಿಂದಲೂ ಹೊಂದಾಣಿಕೆಯ ರಾಜಕೀಯದಲ್ಲಿ ಕೆಂಪುಕಲ್ಲು ವ್ಯವಹಾರ ನಡೆಯುತ್ತಿದೆ.ಪೈಪೋಟಿ ಅಧಿಕವಾದ ಕಾರಣ ರಾಜಕೀಯ ಬಣ್ಣ ತಿರುಗಿದೆ.ಈ ಬಾರಿ ಜಿಲ್ಲೆಯ ಶಾಸಕರು ಒಂದು ಪಕ್ಷ ಸರಕಾರ ಇನ್ನೊಂದು ಪಕ್ಷವಾದ ಕಾರಣ ಸಮಸ್ಯೆ ಬಿಗಡಾಯಿಸಿದೆ.ಎರಡು ಪಕ್ಷದವರು ರಾಜಕೀಯ ಲಾಭ ಪಡೆಯುವ ಹುನ್ನಾರದಲ್ಲಿ ಬಡವರ ಬದುಕು ಮಾತ್ರ ಬೆತ್ತಲಾಗಿ ಬಿಟ್ಟಿದೆ.

ಮುಖ್ಯಮಂತ್ರಿಗಳ ಜೊತೆ ಸಭೆ ರದ್ದು: ಬೇಸಿಗೆ ಸಮೀಪಿಸಿದರು ಕೂಡ ಕೆಂಪುಕಲ್ಲು ಪೂರೈಕೆಯಾಗದಿರುವ ಕಾರಣ ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿರುವ ಕುರಿತು ಸಾರ್ವಜನಿಕರ ಬೇಡಿಕೆಯಂತೆ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಮಂಗಳವಾರ ಎಲ್ಲಾ ಶಾಸಕರು, ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಯುತ್ತಿದೆ ಮತ್ತು ಸಮಸ್ಯೆ ಬಗೆಹರಿಯಲಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದರು.ಆದರೆ ಇಂದು ನಡೆಯಬೇಕಿದ್ದ ಮುಖ್ಯಮಂತ್ರಿ ಸಭೆ ರದ್ದಾಗಿದೆ.ಮತ್ತು ಬೆಳಗಾಂ ಅಧಿವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ.ಆದರೆ ಅಧಿವೇಶನದಲ್ಲಿ ನಿರ್ಣಯವಾಗಿ ಅನುಷ್ಟಾನವಾಗಬೇಕಾದರೆ ಕನಿಷ್ಟ ತೊಂಬತ್ತು ದಿನಗಳು ಬೇಕಿದೆ.ಹೀಗಾಗಿ ನಿಯಮ ಪ್ರಕಾರ ಕಲ್ಲುಕೋರೆ ಈ ವರ್ಷ ಆರಂಭವಾಗುವುದೆ ಕಷ್ಷ ಎನ್ನುವಂತಿದೆ.

ಬೈಂದೂರಿನಲ್ಲಿ ಮರಳು ಕಲ್ಲು ಕೋರೆ ಹೊಂದಾಣಿಕೆಗೆ ಯಾವ ಪಕ್ಷವು ಇಲ್ಲಾ: ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಬಿಜೆಪಿ ಎರಡು ಪ್ರಬಲ ಪಕ್ಷಗಳಿವೆ.ಉಳಿದ ವಿಚಾರದಲ್ಲಿ ಎರಡು ಪಕ್ಷದ ಮುಖಂಡರ ನಡುವೆ ಭಯಂಕರ ಹೋರಾಟ ಜಿದ್ದಾಜಿದ್ದಿ ಆದರೆ ಕ್ಷೇತ್ರದ ಬಹುತೇಕ ಕಡೆ ಮರಳು ಮತ್ತು ಕಲ್ಲು ಕೋರೆಯಲ್ಲಿ ಮಾತ್ರ ರಾಜಿಯ ಜೊತೆಗೆ ಪಾಲುದಾರಿಕೆಯಿದೆ.ಕಾಂಗ್ರೇಸ್ ಬಂದರೆ ಅ ಪಕ್ಷದ ಮುಖಂಡರು ಮುಂದೆ ನಿಂತು ಮಾತುಕತೆ ಮಾಡುವುದು ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಲಿನ ಮುಖಂಡರು ನೇತ್ರತ್ವ ವಹಿಸುವುದು ಒಟ್ಟಾರೆ ಮುಂಚೂಣಿಯಲ್ಲಿರುವ ವ್ಯಕ್ತಿ ಮಾತ್ರ ಬದಲಾವಣೆಯಾಗುತ್ತದೆ ಬಿಟ್ಟರೆ ಪಾಲುದಾರರ ಬದಲಾವಣೆಯಿಲ್ಲ.ಕೆಲವು ಕಡೆ ಹೊಂದಾಣಿಕೆ ಕೊರತೆಯಾಗಿ ಸ್ಥಗಿತಗೊಂಡಿದೆ.ಈಗ ಪರವಾನಗೆ ಪಡೆಯಲು ಸಿದ್ದವಾಗಿರುವ ಕಲ್ಲು ಮರಳು ಕೋರೆಗಳಿಗೂ ಎರಡು ಪಕ್ಷದ ಮುಖಂಡರ ಹೊಂದಾಣಿಕೆ ಮಾತುಕತೆ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ.ಮಾತ್ರವಲ್ಲದೆ ಸಣ್ಣಪುಟ್ಟ ಕೋರೆ ಮಾಡುವವರನ್ನು ಪರೋಕ್ಷವಾಗಿ ಅಧಿಕಾರಿಗಳ ಮೂಲಕ ಛೂ ಬಿಟ್ಟ ಪರಿಣಾಮ ದಿನದಿಂದ ದಿನಕ್ಕೆ ಪರಿಸ್ಥಿತಿ ಈ ಮಟ್ಟಕ್ಕೆ ಬಿಗಡಾಯಿಸಿದೆ.ಬೈಂದೂರು ಭಾಗದಲ್ಲಿ ಬ್ರಹತ್ ಪ್ರಮಾಣದ ಕೆಂಪುಕಲ್ಲು ಗಣಿಗಾರಿಕೆಗೆ ಪ್ರಬಲ ವ್ಯಕ್ತಿಗಳ ತೆರೆಮರೆಯ ಹೋರಾಟ ಅವಿರತವಾಗಿ ನಡೆಯುತ್ತಿದೆ.ಆದರೆ ಸಾರ್ವಜನಿಕರು ಮಾತ್ರ ಇದಕ್ಕೆ ವಿರೋದ ವ್ಯಕ್ತಪಡಿಸುವ ಸಿದ್ದತೆಯಲ್ಲಿದ್ದಾರೆ.

ಪ್ರತಿಭಟನೆಗೆ ಸಿದ್ದತೆ; ರಾಜ್ಯದ ಇತರ ಜಿಲ್ಲೆಗಳಿಗೆ ಒಂದು ನಿಯಮ, ಉಡುಪಿ ಜಿಲ್ಲೆಗೆ ಮಾತ್ರ ಪ್ರತ್ಯೇಕ ನಿಯಮ.ಹತ್ತರಿಂದ ಹದಿನೈದು ಲಕ್ಷ ಖರ್ಚು ಮಾಡಿ ಪರವಾನಗೆ ಪಡೆಯಲು ಸಾದ್ಯವಿಲ್ಲದ ಮಾತು.ಪರವಾನಗೆ ಪಡೆದ ಭೂಮಿಯಲ್ಲಿ ಕಲ್ಲು ದೊರೆಯುವ ಸ್ಪಷ್ಟತೆಯಿಲ್ಲ.ಈ ಕುರಿತು ಈಗಾಗಲೆ ಎಲ್ಲಾ ಜನನಾಯಕರ ಗಮನಕ್ಕೆ ತರಲಾಗಿದೆ.ಮುಖ್ಯಮಂತ್ರಿಗಳ ಸಭೆಯಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಕಲ್ಲುಕೋರೆ ಮಾಲಕರು,ಚಾಲಕರ ಸಂಘದ ವತಿಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವ ಸಿದ್ದತೆಯಲ್ಲಿದೆ………………...ದಿವಾಕರ ಶೆಟ್ಟಿ ನೆಲ್ಯಾಡಿ, ಅದ್ಯಕ್ಷರು ಬೈಂದೂರು ಕಲ್ಲುಕೋರೆ ಮಾಲಕರ ಸಂಘ

ಅದೇನೆಯಿದ್ದರು ಸಹ ಸರಕಾರ,ಜಿಲ್ಲಾಡಳಿತ,ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು.ಸಾವಿರಾರು ಜನರ ಬದುಕಿಗೆ ಆಸರೆಯಾಗುವ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದು ಜಿಲ್ಲೆಯ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ.ಉಳ್ಲವರ ಹೊಂದಾಣಿಕೆ ಬಿಟ್ಟು ಜನರ ಕಷ್ಟದ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡಲಿ ಆನ್ನೋದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

ವರದಿ/ಚಿತ್ರ: ಶಿರೂರು ಡಾಟ್ ಕಾಮ್

 

 

 

 

 

 

Leave a Reply

Your email address will not be published. Required fields are marked *

2 × three =