ಬೈಂದೂರು: ಹಲವು ವರ್ಷಗಳ ಹಿಂದೆ ಯಕ್ಷಗಾನ ಸೇವೆಯಲ್ಲಿ ಬೈಂದೂರು ಅತ್ಯಂತ ಪ್ರಸಿದ್ದಿ ಪಡೆದಿತ್ತು. ಹೆಸರಾಂತ ಬಡಗುತ್ತಿಟ್ಟಿನ ಯಕ್ಷಗಾನ ಮೇಳಗಳಲ್ಲಿ ಬೈಂದೂರು ಕಳವಾಡಿ ಮೇಳ ಜನಪ್ರಿಯವಾಗಿತ್ತು.ಈ ಮೇಳದ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದ್ದರೆ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದರು.ಕಾಲ ಕ್ರಮೇಣ ಹಲವು ಸಮಸ್ಯೆಗಳಿಂದ ಮೂರು ದಶಕದ ಹಿಂದೆ ತಿರುಗಾಟವನ್ನು ನಿಲ್ಲಿಸಿತು.ಕಳೆದ ಒಂದು ವರ್ಷ ಕಳುವಾಡಿ ದೇವಸ್ಥಾನ ಪುನರ್ ಪ್ರತಿಷ್ಟೆ ವಿಜ್ರಂಭಣೆಯಿಂದ ನಡೆದಿತ್ತು.ಹಿರಿಯರು ಯುವಕರು ಸಂಘಟಿತರಾಗಿ ಜೀರ್ಣೊದ್ದಾರದಲ್ಲಿ ತೊಡಗಿಸಿಕೊಂಡಿದ್ದರು.ಭಕ್ತರ ಸಂಖ್ಯೆ ಕೂಡ ಅಧಿಕಗೊಂಡಿದೆ.ಈ ವರ್ಷದಿಂದ ಯಕ್ಷಗಾನ ಮೇಳಕ್ಕೆ ಪುನರ್ ಚಾಲನೆ ನೀಡಲಾಗಿದೆ.ಶ್ರೀ ಈಶ್ವರ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಳವಾಡಿ ಎಂಬ ಹೆಸರಿನಲ್ಲಿ ಸೇವೆ ನೀಡಲು ಮುಂದಾಗಿದೆ.ಕಳವಾಡಿ ಮೇಳ ತಿರುಗಾಟಕ್ಕೆ ಆರಂಭಿಸುತ್ತಿರುವುದು ಯಕ್ಷಗಾನ ಪ್ರೇಕಕರಿಗೆ ಮತ್ತು ಬೈಂದೂರು ಭಾಗಕ್ಕೆ ಅಪಾರ ನಿರೀಕ್ಷೆ ಮೂಡಿಸಿದೆ. ಕೋಟದ ಗುಂಡು ಕಾಂಚನ್ ಅವರ ಯಜಮಾನಿಕತ್ವ ವಹಿಸಿದ್ದಾರೆ.ಮೇಳದ ಪ್ರತಿನಿಧಿ ಉದಯ್ ಕುಮಾರ್ ಜೋಗಿ ಸಂತೆಕಟ್ಟೆ, ಕಿರಣ್ ಆಚಾರ್ ಕೋಟೇಶ್ವರ ಅವರ ಸಹಕಾರದಲ್ಲಿ ನುರಿತ ಕಲಾವಿದರು,ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಮುನ್ನೆಡೆಯಲಿದೆ.
ನ.18 ರಿಂದ ತಿರುಗಾಟ: ನ.18ರಂದು ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಳದ ವಠಾರದಲ್ಲಿ ಮೊದಲ ಗೆಜ್ಜೆಸೇವೆ ನೀಡುವ ಬಳಿಕ ತಿರುಗಾಟ ಆರಂಭಗೊಂಡಿದೆ.
ನ. 22 ರಂದು ದೇವಳದ ವಠಾರದಲ್ಲಿ ಕೆ. ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ವಿರಚಿತ ಕಳವಾಡಿ ಮಾರಿಕಾಂಬಾ ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗವನ್ನು ಪ್ರದರ್ಶಿಸಲಾಗುತ್ತದೆ.ಯಕ್ಷಗಾನಂದ ಕುತ್ವಾಡಿ ವಿರಚಿತ ಕಾರುಣ್ಯ ಸ್ವಾಮಿ ಕೊರಗಜ್ಜ, ಶುಭಾಶಯ್ ಜೈನ್ ವಿರಚಿತ ಕೆಂಪುಕೊಳ, ವಿದ್ಯಾಶ್ರೀ ಆಚಾರ್ಯ ಯಳಜಿತ್ ವಿರಚಿತ ನಾಗ-ನಿರ್ಮಲೆ ಹಾಗೂ ದೇವಿ ಮಹಾತ್ಮೆ, ಕುಂಜ್ಞಾಡಿ ಹಾಗುಳಿ ಕ್ಷೇತ್ರ ಮಹಾತ್ಮೆ ಮತ್ತಿತರ ಎಲ್ಲಾ ಪೌರಾಣಿಕ ಪ್ರಸಂಗಳು ಈ ಬಾರಿ ಪ್ರದರ್ಶನಗೊಳ್ಳಲಿದೆ.
ನೂತನ ಯಕ್ಷಗಾನ ಮೇಳ ಅತ್ಯಾಕರ್ಷಕ ವೈವಿದ್ಯ ಪೂರ್ಣ ರಂಗ ಸಜ್ಜಿಕೆಯೊಂದಿಗೆ ಹೊಂದಿದೆ.ಹಿಮ್ಮೇಳದಲ್ಲಿ ಯೋಗೇಂದ್ರ ಆಚಾರ್ಯ ತಗ್ಗರ್ಸೆ, ಶಂಕರ ಗೌಡ ಗೋಳಿಹೊಳೆ, ರವಿ ಭಟ್ ಅಂಕೋಲಾ, ಉದಯ್ ಕುಮಟಾ, ಮಂಜು ಜೈನ್ ಕಾರ್ಗಲ್, ಹರೀಶ್ ಕೇರೆಕುಳಿ, ರಮೇಶ್ ನಾಯ್ಕ್ ,ಮುಮ್ಮೇಳದಲ್ಲಿ ನಿಟ್ಟೂರು ಅನಂತ ಹೆಗಡೆ, ತಿಮ್ಮಪ್ಪ ಗೌಡ ಹೊನ್ನಾವರ, ದಾಮೋದರ ಕೊಪ್ಪಾಟಿ, ಗಣೇಶ್ ಸುರತ್ಕಲ್, ರಾಘವೇಂದ್ರ ಸಿದ್ದಾಪುರ, ದೇವರಾಜ್ ಸಂಡಳ್ಳಿ, ಸುಬ್ರಹ್ಮಣ್ಯ ಬಗ್ವಾಡಿ, ಪ್ರಶಾಂತ್ ಚೇರ್ಕಾಡಿ, ಅಕ್ಷಯ್ ಮಾರ್ಕೋಡು, ಶಶಾಂಕ್ ಕುಮಾರ್ ಗಿಳಿಯಾರ್, ಸುರೇಶ ಬೈಲ್‌ಗದ್ದೆ, ಬೀರಪ್ಪ ಮುಚ್ಚಳ್ಳಿ, ನಾಗರಾಜ್ ಉದ್ಯಾವರ, ಕಮಲಾಕರ ಮರಾಠೆ, ರಾಘವ ಗುಡ್ಡೇಕೆರೆ, ಉದಯ್ ಜೋಗಿ ಸಂತೆಕಟ್ಟೆ, ವಿನಯ್‌ಕುಮಾರ್ ಮೇಳಿಗೆ, ರವಿಚಂದ್ರ ಚೇರ್ಕಾಡಿ, ಪ್ರವೀಣ್‌ಕುಮಾರ್, ಸುರಾಗ್ ಕುಮಾರ್ ಹೇರೂರು, ಶೇಖರ ಪೂಜಾರಿ ನಾಯ್ಕನಕಟ್ಟೆ ಮತ್ತಿತರರು ಕಲಾವಿದರು ಗೆಜ್ಜೆಕಟ್ಟಲಿದ್ದಾರೆ.
ಹೇಳಿಕೆ.
ಬೈಂದೂರು ತಾಲೂಕಿನ ಕಳವಾಡಿ ಶ್ರೀ ಈಶ್ವರ ಮಾರಿಕಾಂಬ ದೇವಳವು ಬಹಳ ಕಾರಣೀಕ ಹಾಗೂ ಐತಿಹ್ಯ ಹೊಂದಿರುವ ದೇಗುಲವಾಗಿದ್ದು ಕಳೆದ ಮೂರು ವರ್ಷದ ಹಿಂದೆ ಜೀರ್ಣೋದ್ಧಾರ ಕಾರ್ಯ ನಡೆಸಿ, ನೂತನ ಶಿಲಾಮಯ ದೇಗುಲ ನಿರ್ಮಿಸಲಾಗಿದೆ.ಈ ದೇಗುಲದ ವತಿಯಿಂದ ನೂರಾರು ವರ್ಷದ ಹಿಂದಿನಿಂದ ಯಕ್ಷಗಾನ ಮೇಳ ತಿರುಗಾಟ ನಡೆಸುತ್ತಿದ್ದು ಕಾರಣಾಂತರಗಳಿಂದ ಅದು ಸುಮಾರು 25-30 ವರ್ಷದಿಂದ ಸ್ಥಗಿತಗೊಂಡಿತ್ತು.ದೇವಳದ ವತಿಯಿಂದ ಬಹಳ ಹಿಂದಿನಿಂದ ನಡೆಸಿಕೊಂಡು ಬಂದಿರುವ ಕರಾವಳಿಯ ಗಂಡುಕಲೆ ಯಕ್ಷಗಾನ ನಶಿಸಬಾರದು ಎನ್ನುವ ನೆಲೆಯಲ್ಲಿ ಇದೀಗ ಮತ್ತೆ ಮರುಜೀವ ನೀಡಲಾಗಿದೆ…… ಕುಮಾರ ಶೆಟ್ಟಿ ಮತ್ತು ಅಭಿಜಿತ್ ಹೆಗ್ಡೆ ಕಳವಾಡಿ, ದೇವಳದ ಆಡಳಿತ ಮೊಕ್ತೇಸರರು.