ಬೈಂದೂರು: ಡಿಸೆಂಬರ್ 20, 21 ಹಾಗೂ 22 ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಅಂಗವಾಗಿ ಕನ್ನಡ ರಥಯಾತ್ರೆ ಬೈಂದೂರಿಗೆ ಮಂಗಳವಾರ ಆಗಮಿಸಿತು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ,ತಾಲೂಕು ಆಡಳಿತ ಬೈಂದೂರು ಇದರ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಿದ ಕನ್ನಡ ರಥವನ್ನು ಉಡುಪಿ ಜಿಲ್ಲೆಗೆ ಸ್ವಾಗತಿಸಿಕೊಳ್ಳಲಾಯಿತು.
ಬೈಂದೂರು ಪ್ರವಾಸಿ ಮಂದಿರದಲ್ಲಿ ಕನ್ನಡ ರಥಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಕನ್ನಡದ ಕೈಂರ್ಯದ ಮನಸ್ಸುಗಳು ಒಂದಾಗುತ್ತಿದ್ದಾಗ ಕನ್ನಡಪರ ಚಟುವಟಿಕೆ ವೃದ್ದಿಸುತ್ತದೆ.ಇತರ ಭಾಷೆಯ ವ್ಯಾಮೋಹದಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು ಭಾಷೆಯ ಉಳಿವು ಮತ್ತು ಬೆಳವಣಿಗೆ ಅದರಷ್ಟಕ್ಕೆ ನಡೆಯುತ್ತಿರುತ್ತದೆ.ಆದರೆ ಭಾಷೆಯ ಅಭಿಮಾನ ಸದಾ ನಮ್ಮಲ್ಲಿರುಬೇಕು.ಇತ್ತೀಚಿನ ದಿನಗಳಲ್ಲಿ ನೆಲ,ಜಲ,ಭಾಷೆ,ಅಭಿಮಾನ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಪ್ರದೀಪ್ ಆರ್, ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ,ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ,ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ,ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂರ್ಡಾಕರ್,ಸಾಹಿತಿ ಚಂದ್ರಶೇಖರ ನಾವಡ,ಉಪತಹಶೀಲ್ದಾರ ಲತಾ ಶೆಟ್ಟಿ,ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ.ನಾಯ್ಕ,ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ,ಬೈಂದೂರು ಮಾದರಿ ಶಾಲೆಯ ಮುಖ್ಯ ಶಿಕ್ಷಕ ಜನಾರ್ಧನ ದೇವಾಡಿಗ,ಪುಂಡಲೀಕ ನಾಯಕ್,ಜನಪದ ಪರಿಷತ್ ಅಧ್ಯಕ್ಷ ಗೋವಿಂದ ಬಿಲ್ಲವ,ಪೊಲೀಸ್ ಇಲಾಖೆ,ಅಗ್ನಿಶಾಮಕ ದಳ,ಮೆಸ್ಕಾಂ,ಕಂದಾಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಯ ಸದಸ್ಯರು ಹಾಜರಿದ್ದರು.
ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕ.ಸಾ.ಪ ಬೈಂದೂರು ಕಾರ್ಯದರ್ಶಿ ಸುಧಾಕರ ಪಿ.ಬೈಂದೂರು ಸ್ವಾಗತಿಸಿದರು.ಕ.ಸಾ.ಪ ಸದಸ್ಯ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ವಂದಿಸಿದರು.ಬಳಿಕ ಬೈಂದೂರು ತಾಲೂಕು ಆಡಳಿತ ಕಛೇರಿಯಿಂದ ಬೈಂದೂರು ಸರ್ಕಲ್ ವರೆಗೆ ಅದ್ದೂರಿಯ ಜಾಥಾ ಮೂಲಕ ಕನ್ನಡ ರಥವನ್ನು ಬೀಳ್ಕೋಡಲಾಯಿತು.
ವರದಿ/ಚಿತ್ರ: ಗಿರಿ ಶಿರೂರು