ಬೈಂದೂರು: ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ 78ನೇ ಸ್ವಾತಂತ್ರೋತ್ಸವವನ್ನು ಬೈಂದೂರು ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು.ಬೈಂದೂರು ತಹಶೀಲ್ದಾರ ಪ್ರದೀಪ್ ಆರ್ ದ್ವಜಾರೋಹಣಗೈದರು ಬಳಿಕ ಮಾತನಾಡಿದ ಅವರು ಈ ನೆಲ,ಜಲ,ಸಂಸ್ಕ್ರತಿಯ ರಕ್ಷಣೆ ನಮ್ಮೆಲ್ಲರ ಜವಬ್ದಾರಿ.ಸಂವಿಧಾನಕ್ಕೆ ಗೌರವ ನೀಡಿ ಕಾನುನುಗಳನ್ನು ಗೌರವಿಸಿ ಪರಸ್ಪರ ಪ್ರೀತಿ,ವಿಶ್ವಾಸದ ಬದುಕು ಸಾಗಿಸುವ ಸಂದೇಶ ನೀಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಈ ದೇಶದ ಸ್ವಾತಂತ್ರ್ಯದ ಸಂತೋಷದಲ್ಲಿ ಸಾವಿರಾರು ಜನರ ತ್ಯಾಗ ಬಲಿದಾನದ ನೆನಪು ಇದೆ.ಇಂದು ಭಾರತ ದೇಶವನ್ನು ಸುತ್ತ ಮುತ್ತಲಿನ ದೇಶಗಳು ಅವಲಂಬನೆಯ ಜೊತೆಗೆ ಆಸರೆಯನ್ನು ಬಯಸಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ.ಬೈಂದೂರು ಜಿಲ್ಲೆಯಲ್ಲಿ ಅತ್ಯಂತ ವಿಶಿಷ್ಟ ಸ್ಥಾನ ಮಾನ ಹೊಂದಿದೆ.ಮುಂದಿನ ದಿನದಲ್ಲಿ ಅದ್ದೂರಿ ಉತ್ಸವದ ಆಚರಣೆ ಮೂಲಕ ಸಾಂಸ್ಕ್ರತಿಕ ಸಂಭ್ರಮದ ಮೂಲಕ ಸಮೃದ್ದ ಬೈಂದೂರಿನ ಕನಸು ಗಟ್ಟಿಗೊಳಿಸಬೇಕಿದೆ ಎಂದರು.
ಮುಖ್ಯ ಅತಿತಥಿಗಳಾಗಿ ಬೈಂದೂರು ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ,ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್,ಬೈಂದೂರು ಪಟ್ಟಣ ಪಂಚಾಯತ್ ಅಧಿಕಾರಿ ಅಜಯ್ ಭಂಡಾರ್‌ಕರ್, ಕಂದಾಯ ಇಲಾಖೆಯ ಸಿಬಂದಿಗಳು,ಆರಕ್ಷಕ ಠಾಣೆಯ ಸಿಬಂದಿಗಳು,ಅಗ್ನಿಶಾಮಕ ಸಿಬಂದಿಗಳು ಹಾಗೂ ಪಟ್ಟಣ ಪಂಚಾಯತ್ ಸಿಬಂದಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ವಾಯು ಸೇನೆಯ ಸೈನಿಕ ವಿಠ್ಠಲ ಹೆಬ್ಬಾಗಿಲು ರವರನ್ನು ಸಮ್ಮಾನಿಸಲಾಯಿತು.ಬಳಿಕ ಆರಕ್ಷಕ ಠಾಣೆ,ಅಗ್ನಿಶಾಮಕ ದಳ ಹಾಗೂ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ವಂದಿಸಿದರು.
ವರದಿ/ಗಿರಿ ಶಿರೂರು