ಬೈಂದೂರು: ಮೊನ್ನೆಯಷ್ಟೆ ಮಳೆಯ ಅಬ್ಬರದಿಂದ ಒಂದಿಷ್ಟು ಮುಕ್ತಿ ಕಂಡ ಬೈಂದೂರು ಜನತೆಯ ರಾಜಕೀಯ ಅಖಾಡದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ರಾಜಕೀಯ ಬಿರುಸು ಕುತೂಹಲ ಮೂಡಿಸುತ್ತಿದೆ.ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವದಿಂದ ಶಾಸಕರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಮತ್ತು ಶಾಸಕರ ಸಭೆಗೆ ಅಧಿಕಾರಿಗಳು ಬಾರದಂತೆ ತಡೆಯಲಾಗುತ್ತಿದೆ ಎಂದು ಆರೋಪಿಸಿ ಶಾಸಕ ಗುರುರಾಜ ಗಂಟಿಹೊಳೆ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಸಂಜೆಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರು ಬೈಂದೂರಿನ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ.ಹಿಂಬಾಗಿಲಿನ ಅಧಿಕಾರ ಶೋಭೆಯಲ್ಲ.ಪಶು ವೈದ್ಯರು ಸೇರಿದಂತೆ ಉತ್ತಮ ಅಧಿಕಾರಿಗಳ ವರ್ಗಾವಣೆ ಮೂಲಕ ಮಾಜಿ ಶಾಸಕರ ನೇತ್ರತ್ವದಲ್ಲಿ ಕಾಂಗ್ರೇಸ್ ತಂಡ ವರ್ಗಾವಣೆ ದಂಧೆಯಲ್ಲಿ ಹಣ ಮಾಡುತ್ತಿದ್ದಾರೆ.ಈ ಹಿಂದೆ ಶಾಸಕರ ಮನೆಯಲ್ಲಿ ಕೂಡ ಸಭೆ ನಡೆಸಿದ ಉದಾಹರಣೆಗಳಿವೆ.ಸಾದ್ಯವಾದರೆ ಅಭಿವೃದ್ದಿಗೆ ಸಹಕರಿಸಬೇಕು.ತಾಕತ್ತಿದ್ದರೆ ಕ್ಷೇತ್ರದ ಅಭಿವೃದ್ದಿಗೆ ಅನುದಾನ ತಂದು ತೋರಿಸಲಿ.ಜನರು ಆರಿಸಿ ಕಳುಹಿಸಿದ ಶಾಸಕ ನಾನು.ಇಂತಹ ಯಾವುದೇ ದಬ್ಬಾಳಿಕೆಗೆ ಬಗ್ಗುವುದಿಲ್ಲ ಮತ್ತು ಶಾಸಕರ ಅಧಿಕಾರ ನನಗೆ ತಿಳಿಸುವ ಅಗತ್ಯವಿಲ್ಲ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಜಿಲ್ಲಾಧಿಕಾರಿಗಳ ಬೇಟಿ: ಸೋಮವಾರ ಸಂಜೆಯಿಂದ ಕಾರ್ಯಕರ್ತರೊಂದಿಗೆ ಧರಣಿ ಆರಂಭಿಸಿದ ಬಳಿಕ ತಹಶೀಲ್ದಾರರು,ಸಹಾಯಕ ಕಮಿಷನರ್ ಶಾಸಕರ ಮನ ಒಲಿಸುವ ಪ್ರಯತ್ನ ಮಾಡಿದರು ಕೂಡ ಪ್ರಯೋಜನವಾಗಿಲ್ಲ. ಮಾತ್ರವಲ್ಲದೆ ಜಿಲ್ಲಾ ಬಿಜೆಪಿ ಮುಖಂಡರು ಕಾಪು,ಉಡುಪಿ,ಕುಂದಾಪುರ ಶಾಸಕರು ಕೂಡ ಆಗಮಿಸಿ ಬೆಂಬಲ ನೀಡಿದ್ದರು.
ಮಂಗಳವಾರ ಬೆಳಿಗ್ಗೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳ ಜೊತೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಮುಖಂಡರು ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಜಿಲ್ಲಾಡಳಿತದಿಂದ ಶಾಸಕರ ಹಕ್ಕುಚ್ಯುತಿ ಆಗಿಲ್ಲ.ಸಾಂವಿಧಾನಿಕ ನಿಯಮಗಳನ್ನು ಬಿಟ್ಟು ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಶಾಸಕರ ಖಾಸಗಿ ಕಛೇರಿಯಲ್ಲಿ ಅಧೀಕೃತ ಸಭೆಗೆ ಸರಕಾರದ ನಿಯಮದಲ್ಲಿ ಅವಕಾಶವಿಲ್ಲ. ಶಾಸಕರು ಅಧಿಕಾರಿಗಳ ಸಭೆ ಮಾಡಬಾರದೆಂದು ನಾವು ಹೇಳಿಲ್ಲ.ಬದಲಾಗಿ ಸರಕಾರಿ ಕಛೇರಿ,ಶಾಸಕರ ಭವನದಲ್ಲಿ ನಡೆಯುವ ಅಽಕೃತ ಸಭೆಯಲ್ಲಿ ಮಾತ್ರ ಭಾಗವಹಿಸಲು ತಿಳಿಸಿದ್ದೇವೆ.ಬೈಂದೂರು ಶಾಸಕರ ಮನವಿಯನ್ನು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.ಸರಕಾರದ ಸ್ಪಷ್ಟನೆ ಬಂದ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ,ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್,ರಾಜೇಶ ಕಾವೇರಿ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಸುರೇಶ ಶೆಟ್ಟಿ,ಮಹೇಂದ್ರ ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.
ಬೈಂದೂರು ಶಾಸಕರು ಜನರನ್ನು ದಿಕ್ಕು ತಪ್ಪಿಸುವ ನಾಟಕ ನಿಲ್ಲಿಸಲಿ:ಕಿಶನ್ ಹೆಗ್ಡೆ; ಶಾಸಕರಾದವರಿಗೆ ಕನಿಷ್ಟ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಜ್ಞಾನ ಹಾಗೂ ಅಗತ್ಯ ಕಾನೂನಿನ ಅರಿವಿಲ್ಲದೆ ಪ್ರಚಾರದ ಅಮಲಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ನಾಟಕವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನಿಲ್ಲಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಹೇಳಿದರು.ಅವರು ಮಂಗಳವಾರ ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಬೈಂದೂರು ಆಡಳಿತ ಸೌಧದ ಎದುರುಗಡೆ ಶಾಸಕ ಗುರುರಾಜ ಗಂಟಿಹೊಳೆ ಧರಣಿ ಕುಳಿತಿರುವುದು ಮತ್ತು ಕಾಂಗ್ರೆಸ್ ಪಕ್ಷ ಶಾಸಕರ ಅಧಿಕಾರವನ್ನು ಕಸಿಯುತ್ತಿದೆ ಎನ್ನುವ ಆರೋಪಕ್ಕೆ ಉತ್ತರಿಸಿ ಸಂವಿಧಾನದಲ್ಲಿ ಶಾಸಕರಿಗೆ ಕೆ.ಡಿ.ಪಿ ಸಭೆ ಹೊರತುಪಡಿಸಿದರೆ ಮತ್ಯಾವ ಸಭೆ ನಡೆಸಲು ಅಧಿಕಾರ ಇದೆ ಎಂದು ತಿಳಿದುಕೊಳ್ಳಬೇಕು.ಅದರಲ್ಲೂ ಸರಕಾರಿ ಅಧಿಕಾರಿಗಳನ್ನು ಸಭೆಗೆ ಕರೆಯಬೇಕಾದರೆ ಅದರದ್ದೆ ಆದ ನಿಯಮಗಳಿವೆ.ನೋಟಿಸ್ ನೀಡುವ ಜೊತೆಗೆ ಕಡತ ನಿರ್ವಹಣೆ ಕೂಡ ಅಗತ್ಯ.ಆದರೆ ಯಾವುದೇ ನಿಯಮ ಪಾಲಿಸದೆ ಕಾನೂನಿನಲ್ಲಿ ಅವಕಾಶವಿಲ್ಲ.ಖಾಸಗಿ ಕಛೇರಿಯಲ್ಲಿ ಅಧಿಕಾರಿಗಳನ್ನು ಕರೆದು ಸಭೆ ನಡೆಸುವ ಅಧಿಕಾರ ಸಂವಿಧಾನದಲ್ಲಿಲ್ಲ ಎನ್ನುವ ಸಾಮಾನ್ಯ ಜ್ಞಾನ ಶಾಸಕರಿಗಿಲ್ಲದಿರುವುದು ಆಶ್ಚರ್ಯ ತಂದಿದೆ.ಇಂತಹ ನಾಟಕಗಳ ಮೂಲಕ ಜನರನ್ನು ಮರಳು ಮಾಡುವುದು ಬಿಜೆಪಿ ಪಕ್ಷಕ್ಕೆ ಕರಗತವಾಗಿದೆ.ಸಾದ್ಯವಾದರೆ ವರಾಹಿ ಬಲದಂಡೆ ಕುರಿತು ಧರಣಿ ನಡೆಸಲಿ. ಕೃಷಿಕರ, ಬಡವರ ಪರ ಇರುವ ಯೋಜನೆಗಳ ಅನುಷ್ಟಾನಕ್ಕೆ ಧರಣಿ ನಡೆಸಿ ಜನರ ವಿಶ್ವಾಸಗಳಿಸಲಿ.ಶಾಸಕರು ಇಂತಹ ಗೊಂದಲ ಸೃಷ್ಟಿಸುವ ಪ್ರಯತ್ನ ನಿಲ್ಲಿಸಲಿ ಎಂದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಮಾತನಾಡಿ ಬೈಂದೂರು ಶಾಸಕರು ಸಾಂವಿಧಾನಿಕ ನಿಯಮ ತಿಳಿಯದೆ ಕಾರ್ಯಾಂಗದ ಎದುರು ಧರಣಿ ಕುಳಿತಿರುವುದು ಅವರ ಅನುಭವದ ಕೊರತೆಯನ್ನು ತೋರಿಸುತ್ತಿದೆ.ಮಾಜಿ ಶಾಸಕರ ಬಗ್ಗೆ ಆರೋಪಿಸುವ ನೈತಿಕತೆ ಅವರಿಗಿಲ್ಲ.ಮಾಜಿ ಶಾಸಕರು ಭ್ರಷ್ಟಾಚಾರ ಅಥವಾ ವರ್ಗಾವಣೆ ದಂಧೆ ಮಾಡಿದ್ದಾರೆ ಎನ್ನುವ ಆರೋಪ ಮಾಡುವ ಬಿಜೆಪಿ ಶಾಸಕರು ದಾಖಲೆ ಕೊಟ್ಟು ಮಾತಾಡಲಿ.ನಾಲ್ಕು ಬಾರಿ ಬೈಂದೂರು ಕ್ಷೇತ್ರದ ಶಾಸಕರಾದ ಕೆ.ಗೋಪಾಲ ಪೂಜಾರಿಯವರ ಬಗ್ಗೆ ಹಗುರವಾಗಿ ಮಾತನಾಡುವುದು ಕಾಂಗ್ರೆಸ್ ಪಕ್ಷ ಸಹಿಸೋದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ,ಶಂಕರ ಪೂಜಾರಿ,ನಾಗರಾಜ ಶೆಟ್ಟಿ,ಪ್ರಕಾಶ್ಚಂದ್ರ ಶೆಟ್ಟಿ ,ಸದಾಶಿವ ಡಿ.ಪಡುವರಿ,ನಾಗರಾಜ ಗಾಣಿಗ,ಮಾಜಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ,ಮದನ್ ಕುಮಾರ್ ಉಪ್ಪುಂದ ಮೊದಲಾದವರು ಹಾಜರಿದ್ದರು.
ವರದಿ/ಗಿರಿ ಶಿರೂರು