ಬೈಂದೂರು: ಕಳೆದ ಹಲವು ದಿನಗಳಿಂದ ಬೈಂದೂರು ಭಾಗದಲ್ಲಿ ನಿರಂತರ ಎಡಬಿಡದೆ ಮಳೆ ಸುರಿಯುತ್ತಿದೆ.ಈ ಮಳೆಗೆ ಪಡುವರಿ ಗ್ರಾಮದ ಸೋಮೇಶ್ವರ ಗುಡ್ಡ ಕಳೆದ ಒಂದು ವಾರದಿಂದ ಕುಸಿಯುತ್ತಿದೆ ಹಾಗೂ ಅಪಾರ ಪ್ರಮಾಣದಲ್ಲಿ ಮಣ್ಣು ಚರಂಡಿ ಹಾಗೂ ರಸ್ತೆಗೆ ಸೇರಿಕೊಳ್ಳುತ್ತಿದೆ.
ಉಡುಪಿ ಜಿಲ್ಲಾಧಿಕಾರಿ ಬೇಟಿ; ಶನಿವಾರ ಸಂಜೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಬೇಟಿ ನೀಡಿ ಮಾಹಿತಿ ಪಡೆದರು.ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ತಾತ್ಕಾಲಿಕವಾಗಿ ಟಾರ್ಪಾಲಿನ್ ಅಳವಡಿಸುವ ಮೂಲಕ ನೀರು ಇಂಗದಂತೆ ಕ್ರಮಕೈಗೊಳ್ಳಲು ತಿಳಿಸಲಾಗಿದೆ.ಗುಡ್ಡ ಕುಸಿತದ ಮಾಹಿತಿ ಪಡೆದು ಶಾಶ್ವತ ಪರಿಹಾರ ಮತ್ತು ಕಾನೂನು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.ಬಳಿಕ ಜಿಲ್ಲಾಧಿಕಾರಿಗಳು ವತ್ತಿನೆಣೆ ಪರಿಸರಕ್ಕೆ ಬೇಟಿ ನೀಡಿ ಹೆದ್ದಾರಿ ಪಕ್ಕದಲ್ಲಿರುವ ಕಸದ ವಿಲೇವಾರಿ ಮತ್ತು ಹೇನ್‌ಬೇರು ಬಳಿ ಶಿಥಿಲಗೊಂಡಿರುವ ರಸ್ತೆಯ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಐ.ಆರ್.ಬಿ ಅಧಿಕಾರಿಗಳಿಗೆ ತಿಳಿಸಿದರು.ಕಡಲ್ಕೊರೆತ ಸಂಭವಿಸಿದ ದೊಂಬೆ ಚೋಣುಮನೆ ಪ್ರದೇಶಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಮಳೆಗಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬೈಂದೂರು ಶಾಸಕರ ಬೇಟಿ: ಗುಡ್ಡ ಜರಿದ ಸ್ಥಳಕ್ಕೆ ಶನಿವಾರ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಬೇಟಿ ನೀಡಿ ಈ ಸಮಸ್ಯೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ದೊಂಬೆ ಭಾಗದ ಜನರು ರಸ್ತೆ ಬಂದ್ ಆದ ಕಾರಣ ಹತ್ತಾರು ಕಿ.ಮೀ ಸುತ್ತು ಬಳಸಿ ಬರುತ್ತಿದ್ದು ಇದರಿಂದ ಜನಸಮಾನ್ಯರಿಗೆ ತೊಂದರೆಯಾಗುತ್ತಿದ್ದು ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಶ್ಮೀ ಆರ್,ಬೈಂದೂರು ತಹಶೀಲ್ದಾರ ಪ್ರದೀಪ್ ಆರ್,ಕಂದಾಯ ಇಲಾಖೆಯ ಪ್ರಥಮ ದರ್ಜೆ ನಿರೀಕ್ಷಕ ದೀಪಕ್,ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ್,ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್,ಗಸ್ತು ಅರಣ್ಯ ಪಾಲಕ ಮಂಜುನಾಥ ನಾಯ್ಕ,ಮಾಜಿ ಜಿ.ಪಂ ಸದಸ್ಯ ಸುರೇಶ ಬಟ್ವಾಡಿ,ಮಾಜಿ ಗ್ರಾ.ಪಂ ಸದಸ್ಯ ಸಂಜೀವ ಮೊಗವೀರ ಮೊದಲಾದವರು ಹಾಜರಿದ್ದರು.
ವರದಿ/ಚಿತ್ರ: ಗಿರಿ ಶಿರೂರು