ಬೈಂದೂರು: ಕರಾವಳಿ ಜಿಲ್ಲೆ ಶೈಕ್ಷಣಿಕ ಸಾಧನೆಯ ಜೊತೆಗೆ ಕಲಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಅಗ್ರಗಣ್ಯವಾಗುತ್ತಿರುವುದು ಜಿಲ್ಲೆಯ ಹೆಮ್ಮೆಯಾಗಿದೆ.ವ್ಯಾಪಾರ ಬುದ್ದಿಯ ನಡುವೆ ಸರ್ವತೋಮುಖ ಬೆಳವಣಿಗೆ ವ್ಯಕ್ತಿತ್ವ ಬೆಳೆಸುತ್ತದೆ.ಕಲೆ,ಸಾಹಿತ್ಯ,ಸಂಸ್ಕ್ರತಿ,ಪರಂಪರೆಗಳನ್ನು ಮುಂದುವರಿಸಿಕೊಂಡು ಸಾಗುವುದು ಸಂಘಟಿತ ಪ್ರಯತ್ನದಿಂದ ಮಾತ್ರ ಸಾದ್ಯ.ಬೈಂದೂರಿನ ಸುರಭಿ ನಿರಂತರ ಹತ್ತು ವರ್ಷಗಳಿಂದ ಜೈಸಿರಿ ಮೂಲಕ ಸಾಧಕರನ್ನು ಗುರುತಿಸುವುದು ಬಿಂದುಪುರದ ಗೌರವ ಹೆಚ್ಚಿಸಿದೆ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದರು ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ಸುರಭಿ ಆಶ್ರಯದಲ್ಲಿ ನಡೆದ ಸುರಭಿ ಜೈಸಿರಿ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿ ಈ ಮಾತುಗಳನ್ನಾಡಿದರು.
ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ವಸಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಸದಸ್ಯ ಜಯಾನಂದ ಹೋಬಳಿದಾರ್, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಸ್ವರ್ಣೋದ್ಯಮಿ ಬಾಲರಾಜ್ ಶೇಟ್, ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುರಭಿ ನೃತ್ಯಗುರು ವಿದ್ವಾನ್ ಚಂದ್ರಶೇಖರ ನಾವಡ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಅಭಿನಂದನಾ ನುಡಿಗಳನ್ನಾಡಿದರು.ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿದರು.ನಿರ್ದೇಶಕ ಸುಧಾಕರ ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪಾಧ್ಯಕ್ಷ ಆನಂದ ಮದ್ದೋಡಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ನಂತರ ಸುರಭಿ ವಿದ್ಯಾರ್ಥಿಗಳಿಂದ ನಾಟ್ಯದರ್ಪಣ ಮತ್ತು ನೃತ್ಯ ರೂಪಕ ಪ್ರದರ್ಶನಗೊಂಡಿತು.