ಬೈಂದೂರು: ಪುರಾಣದಂತೆ ಬೈಂದೂರನ್ನು ಬಿಂದು ಮಹರ್ಷಿಯಿಂದ ನಾಮಾಂಕಿತಗೊಂಡ ಬಿಂದುಪುರ ಎಂದು ಕರೆಯಲಾಗುತ್ತಿದ್ದು, ಆ ಹೆಸರಿನಲ್ಲಿ ಕಳೆದ 10 ವರ್ಷದಿಂದ ಕೊಡಮಾಡುವ ಬಿಂಂದುಶ್ರೀ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಆಯ್ಕೆಯಾಗಿದ್ದಾರೆ ಎಂದು ಇಲ್ಲಿನ ಸುರಭಿ ಸಂಸ್ಥೆಯ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ತಿಳಿಸಿದ್ದಾರೆ. ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುರಭಿ ರಿ. ಬೈಂದೂರು ವತಿಯಿಂದ ಸುರಭಿ ಜೈಸಿರಿ ಸಾಂಸ್ಕೃತಿಕ ವರ್ಷಧಾರೆ ಕಾರ್ಯಕ್ರಮ ಜ. 26ರಿಂದ 28ರವರೆಗೆ ಮೂರು ದಿನಗಳವರೆಗೆ ಪ್ರತಿದಿನ ಸಂಜೆ ಗಂಟೆ 6:30ರಿಂದ ಬೈಂದೂರಿನ ಶಾರದಾ ವೇದಿಕೆಯಲ್ಲಿ ನಡೆಯಲಿದ್ದು,
ಜ. 26 ರಂದು ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಉದ್ಘಾಟಿಸಲಿದ್ದಾರೆ, ಸುರಭಿ ಅಧ್ಯಕ್ಷ ನಾಗರಾಪಿ. ಯಡ್ತರೆ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಶುಭಸಂಶನೆಗೈಯಲಿದ್ದಾರೆ, ಈ ಸಂದರ್ಭ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಹಾಗೂ ಹಿರಿಯ ಯಕ್ಷಗಾನ ಕಲಾವಿದ ಮಹಮ್ಮದ್ ಗೌಸ್ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಯಕ್ಷೆತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಜ. 27 ರಂದು ಬಿಂದುಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಶುಭಸಂಶನೆಗೈಯಲಿದ್ದಾರೆ ಸಭಾ ಕಾರ್ಯಕ್ರಮದ ಬಳಿಕ ಸುರಭಿಯ ಭರತನಾಟ್ಯ ವಿದ್ಯಾರ್ಥಿಗಳಿಂದ ನಾಟ್ಯದರ್ಪಣ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜ. 28 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ ಸಂಗೀತ ಹಾಗೂ ರಂಗಭೂಮಿ ಕಲಾವಿದ ಯದುರಾಜ್ ಬೈಂದೂರು ಹಾಗೂ ಡಾ. ಶಿವರಾಮ ಕಾರಂತ ಬಾಲ ಪ್ರಶಸ್ತಿ ಪುರಸ್ಕೃತೆ ಅಕ್ಷರ ಪಟ್ವಾಲ್ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಸುರಭಿಯ ವಿದ್ಯಾಥಿಗಳಿಂದ ಗಾನಲಹರಿ, ನೃತ್ಯ ಸಿಂಚನ ಹಾಗೂ ನೃತ್ಯ ಕುಂಚ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಸುರಭಿ ಉಪಾಧ್ಯಕ್ಷ ಆನಂದ ಮದ್ದೋಡಿ, ನಿರ್ದೇಶಕ ಸುಧಾಕರ ಪಿ, ಸದಸ್ಯ ವೆಂಕಟರಮಣ ಮಯ್ಯಾಡಿ ಉಪಸ್ಥಿತರಿದ್ದರು.