ಬೈಂದೂರು: ವೃತ್ತಿಗೆ ಅನುಗುಣವಾಗಿ ಸಂಘಟನೆಗಳ ಸದಸ್ಯರ ವೃತ್ತಿ ಕೌಶಲ್ಯ ಹೆಚ್ಚಿಸಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ಅತ್ಯಗತ್ಯ. ಧ್ವನಿ-ಬೆಳಕು ವೃತ್ತಿ ನಿರತರು ಅಪಾಯದ ನಡುವೆ ಕೆಲಸ ಮಾಡಬೇಕು. ಅವರಲ್ಲಿ ವೃತ್ತಿ ಕೌಶಲ್ಯಗಳಿದ್ದರೆ ಅದರ ಬಗೆಗೆ ಮುನ್ನೆಚ್ಚರಿಕೆ ವಹಿಸಬಹುದು ಮತ್ತು ಗ್ರಾಹಕರ ನಿರೀಕ್ಷೆಯ ಮಟ್ಟದ ಸೇವೆ ನೀಡಬಹುದು ಎಂದು ರಾಜ್ಯ ವೈದ್ಯ ಸಂಘ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಸುಬ್ರಹಣ್ಯ ಭಟ್ ಹೇಳಿದರು ಅವರು ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಬೈಂದೂರು ವಲಯದ ಧ್ವನಿ ಮತ್ತು ಬೆಳಕು ಸಂಯೋಜಕರ ಸಂಘಟನೆಯ ದಶಮಾನೋತ್ಸವ ಸಮಾರಂಭ ಹಾಗೂ 11ನೇ ಮಹಾಸಭೆ ಉದ್ಘಾಟಿಸಿ ಮಾತನಾಡಿ ಯಾವುದೇ ಕಾರ್ಯಕ್ರಮದ ಯಶಸ್ಸಿನ ಹಿಂದೆ ಈ ಸಂಘಟನೆ ಕೆಲಸ ಮಾಡುತ್ತದೆ. ಧ್ವನಿ ಇಲ್ಲದವರ ಧ್ವನಿಯಾಗುವ ಹಾಗೂ ವೇದಿಕೆಯಲ್ಲಿರುವವರ ಧ್ವನಿಯನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಬೈಂದೂರು ವಲಯಾಧ್ಯಕ್ಷ ಶಶಿಧರ ಶೆಣೈ ಅಧ್ಯಕ್ಷತೆ ವಹಿಸಿದ್ದರು.ವಿವಿಧ ಕ್ಷೇತ್ರದ ನಾಲ್ವರು ಸಾಧಕರನ್ನು ಸಮ್ಮಾನಿಸಲಾಯಿತು. ವಲಯದ ಹತ್ತು ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಿವರಾಜ್ ಮಲ್ಗಾರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.ಕಾರ್ಯದರ್ಶಿ ಯು.ವಿನಾಯಕ ಪ್ರಭು ವರದಿ ವಾಚಿಸಿದರು. ಖಜಾಂಚಿ ಪ್ರಭಾಕರ ಜಿ. ದೇವಾಡಿಗ ಲೆಕ್ಕಪತ್ರ ಮಂಡಿಸಿದರು.ಜಿಲ್ಲೆ ಹಾಗೂ ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘಟನೆಯ ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಗಣೇಶ್ ಎಂ. ಪೂಜಾರಿ ಸ್ವಾಗತಿಸಿದರು.ರಾಜ್ಯ ಸಮಿತಿ ಉಪಾಧ್ಯಕ್ಷ ಹರೇಗೋಡು ಉದಯ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.