ಶಿರೂರು: ಕಾನೂನು ಬಾಹಿರವಾಗಿ ದಲಿತರ ಮನೆ ಸಮೀಪ ಮಣ್ಣು ತೆಗೆದ ಪರಿಣಾಮ ಮನೆ ಶಿಥಿಲಗೊಂಡು ಊರಿನ ಸಭಾಭವನದಲ್ಲಿ ಉಳಿದುಕೊಂಡು ವಾರ ಕಳೆದರು ಕೂಡ ಅಧಿಕಾರಿಗಳು ಗಮನಹರಿಸಿಲ್ಲ.ಮಾತ್ರವಲ್ಲದೆ ಭಾನುವಾರ ಬೈಂದೂರು,ಶಿರೂರು ಪರಿಸರದಲ್ಲಿ ಗುಡುಗು ಮಿಂಚು ಮಳೆಯಾಗಿದ್ದು ಈ ಮಳೆಯಲ್ಲಿಯೇ ಪುಟ್ಟ ಮಕ್ಕಳೊಂದಿಗೆ ದಲಿತ ಕುಟುಂಬ ಊರಿನ ಗಂಜಿ ಕೇಂದ್ರವಾದ ಸಭಾಭವನದಲ್ಲಿ ತಂಗಿದ್ದಾರೆ.

ದಲಿತ ಕುಟುಂಬದ ಮೇಲೆ ದೌರ್ಜನ್ಯ: ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿಯಲ್ಲಿ ನಲವತ್ತರಿಂದ ಐವತ್ತು ವರ್ಷಗಳಿಂದ ಈ ಕುಟುಂಬಗಳು ವಾಸವಾಗಿದ್ದು ಸ್ಥಳೀಯ ಖಾಸಗಿ ವ್ಯಕ್ತಿಯೋರ್ವರು ನಕಲಿ ದಾಖಲೆಗಳ ಮೂಲಕ ಖಾತಾ ಬದಲಾವಣೆ ಮಾಡಿಕೊಂಡು ದೌರ್ಜನ್ಯ ನಡೆಸಿದ್ದಾರೆ.ಮಾತ್ರವಲ್ಲದೆ ಹತ್ತು ವರ್ಷಗಳ ಹಿಂದೆ ಮೃತರಾದ ವ್ಯಕ್ತಿಯ ಹೆಸರಿನಲ್ಲಿ ನಕಲಿ ಜಿ.ಪಿ.ಎ ರಚಿಸಿ ವಿಭಾಗಪತ್ರ ಮಾಡಿಕೊಂಡಿದ್ದಾರೆ.ಮೂಲ ದಾಖಲೆಗಳು ಸಂಪೂರ್ಣ ನಕಲಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲು: ಈ ಪ್ರಕರಣದ ಕುರಿತಂತೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ತಲೆಮರೆಸಿಕೊಂಡಿದ್ದು ಬೈಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಘಟನಾ ಸ್ಥಳಕ್ಕೆ ವಿವಿಧ ಸಂಘಟನೆಯ ಪ್ರಮುಖರು ಬೇಟಿ ನೀಡಿದ್ದಾರೆ.

ಬೈಂದೂರು ಪರಿಸರದಲ್ಲಿ ಹೆಚ್ಚುತ್ತಿರುವ ಭೂ ಪ್ರಕರಣ: ಬೈಂದೂರಿನ ಗ್ರಾಮೀಣ ಭಾಗಗಳಲ್ಲಿ ವ್ಯವಸ್ಥಿತ ತಂಡವೊಂದು ಈ ರೀತಿ ನಕಲಿ ದಾಖಲೆಗಳ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ಜಾಗ ಕಬಳಿಸಿದೆ.ಇಲಾಖೆಯ ಕೆಲವು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದು ಹಲವು ಪ್ರಕರಣಗಳ ದಾಖಲೆ ನೀಡಿದರು ಕೂಡ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.ಜಾಗದ ಪ್ರಕರಣದಲ್ಲಿ ಬಡ ಕುಟುಂಬಗಳ ಮೇಲೆ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿ ಹೆದರಿಸುವುದು ಬಳಿಕ ಜಾಗದ ವಿಷಯಕ್ಕೆ ಅಡ್ಡಿಪಡಿಸದಂತೆ ನೋಡಿಕೊಳ್ಳುವುದು ಸಹಜವಾಗಿ ಬಿಟ್ಟಿದೆ.ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

 

Leave a Reply

Your email address will not be published.

1 × 4 =